ರಾಯಚೂರು: ಜಿಲ್ಲೆಯ ಲಿಂಗಸುಗೂರು ಮತ್ತು ಮಸ್ಕಿ ತಾಲೂಕುಗಳ ಬ್ಯಾಂಕ್ ಮತ್ತು ಗ್ಯಾಸ್ ಕಂಪೆನಿ ಏಜೆನ್ಸಿ ವ್ಯವಸ್ಥಾಪಕರು ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಿ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಬ್ಯಾಂಕ್ ಮತ್ತು ಗ್ಯಾಸ್ ಕಂಪನಿ ಏಜೆನ್ಸಿ ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿ ಅವರು , ಈಗಾಗಲೇ ರೈತರು, ಮಹಿಳೆಯರಿಗೆ ಸರ್ಕಾರ ಅವರ ಖಾತೆಗೆ ಹಣ ಹಾಕಿದ್ದು, ತುರ್ತು ವಿತರಣೆ ಮಾಡಲು ಸೂಚಿಸಿದರು. ಲಾಕ್ ಡೌನ್ ನಿಮಿತ್ತ ಸರ್ಕಾರಗಳು ಪ್ರಧಾನಮಂತ್ರಿ ಜನಧನ ಯೋಜನೆಯಡಿ ಮಹಿಳೆಯರ ಖಾತೆಗೆ 500 ರೂ., ಪ್ರಧಾನಮಂತ್ರಿ ಸಮ್ಮಾನ ಯೋಜನೆಯಡಿ ರೈತರ ಖಾತೆಗೆ ರೂ. 2,000 ಹಣವನ್ನು ಪಾವತಿಸಿವೆ. ಬ್ಯಾಂಕ್ ಸಿಬ್ಬಂದಿ ಬ್ಯೂಸಿನೆಸ್ ಕರಸ್ಪಾಂಡೆಂಟ್ ಬಳಸಿಕೊಂಡು ವಿತರಣೆಗೆ ಮುಂದಾಗಬೇಕು.
ಪ್ರಧಾನಮಂತ್ರಿ ಉಜ್ವಲ್ ಯೋಜನೆಯ ಫಲಾನುಭವಿ ಬಂದಲ್ಲಿ ಅವರಿಗೆ ಸೂಕ್ತ ತಿಳಿವಳಿಕೆ ನೀಡಿ ಗ್ಯಾಸ್ ಸಿಲೆಂಡರ್ ವಿತರಿಸಬೇಕು. ಈ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ನಿಯಮ ಉಲ್ಲಂಘನೆ ಅಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯಲ್ಲಿ ತಾಪಂ ಇಒ ಪಂಪಾಪತಿ ಹಿರೇಮಠ, ತಹಶೀಲ್ದಾರ್ ಚಾಮರಾಜ ಪಾಟೀಲ, ಸಿಪಿಯ ಯಶವಂತ ಬಿಸ್ನಳ್ಳಿ ಭಾಗವಹಿಸಿದ್ದರು.