ರಾಯಚೂರು: ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿ ತಡೆಗೆ ಜಲಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಿದ್ದು, ಅಕ್ರಮ ನೀರಾವರಿ ತಡೆಗೆ ರಾಜ್ಯಸರ್ಕಾರಕ್ಕೆ ನೀಡಲಾಗಿರುವ ಕಾಲಾವಕಾಶದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವ ಅಧ್ಯಕ್ಷ ಚಾಮರಸ್ ಮಾಲೀ ಪಾಟೀಲ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ಲಕ್ಷಾಂತರ ಎಕರೆ ಭೂಮಿ ಅಕ್ರಮ ನೀರಾವರಿಗೆ ಒಳಪಟ್ಟಿದ್ದು, ಜಿಲ್ಲೆಯ ಸಿಂಧನೂರು, ಮಾನವಿ, ಸಿರವಾರ ತಾಲೂಕುಗಳಿಗೆ ನೀರು ಹರಿಸುವುದು ಕಷ್ಟದ ಕಾರ್ಯವಾಗಿದ್ದು, ಅಕ್ರಮ ನೀರಾವರಿ ಕುರಿತು ರಾಜ್ಯ ರೈತ ಸಂಘ ಹಾಗೂ ತುಂಗಭದ್ರಾ ಎಡದಂಡೆ ಹಿತ ರಕ್ಷಣಾ ಸಮಿತಿ ನಿರಂತರ ಹೋರಾಟದ ಫಲವಾಗಿ ಇಂದು ರಾಜ್ಯ ಸರ್ಕಾರ ಅಕ್ರಮ ನೀರಾವರಿ ತಡೆಗೆ ಮುಂದಾಗಿದೆ ಎಂದರು.
ಇತ್ತೀಚೆಗೆ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ಅಕ್ರಮ ನೀರಾವರಿ ತಡೆ ಕುರಿತು ಸಭೆ ನಡೆಸಿದ್ದು, ಜಿಲ್ಲೆಯ ಜನಪ್ರತಿಗಳು ಸೇರಿದಂತೆ ರೈತ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದು, ತುಂಗಭದ್ರಾ ಎಡದಂಡೆ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ನೀರಾವರಿ ಕುರಿತು ದಾಖಲೆ ಸಮೇತ ಸಚಿವರಿಗೆ ನೀಡಲಾಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಅಕ್ರಮ ನೀರಾವರಿ ನಡೆಯುತ್ತಿರುವ ಕುರಿತು ವರದಿ ತಯಾರಿಸಿದ್ದು, ಅದರಲ್ಲಿ ಸುಮಾರು 85 ಸಾವಿರ ಎಕರೆ ಅಕ್ರಮ ನೀರಾವರಿ ಪ್ರದೇಶವಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರು ಅಕ್ರಮ ನೀರಾವರಿ ತುಂಗಭದ್ರಾ ಎಡದಂಡೆಯಲ್ಲಿ ಮಾತ್ರ ನಡೆಯುತ್ತಿಲ್ಲ, ರಾಜ್ಯದ ಇತರೆ ನೀರಾವರಿ ಪ್ರದೇಶಗಳಲ್ಲಿ ನಡೆಯುತ್ತಿದ್ದು, ಅಕ್ರಮ ನೀರಾವರಿ ಶಾಶ್ವತ ತಡೆಗೆ ಅಧಿವೇಶನ ನಂತರ ಕ್ರಮ ಕೈಗೊಳ್ಳಲು ಸಮಯ ಅವಕಾಶ ಕೇಳಿದ್ದು, ಅಧಿವೇಶನ ನಂತರ ಸಚಿವರನ್ನು ಮತ್ತೆ ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗುವುದು. ರಾಜ್ಯ ಸರ್ಕಾರಕ್ಕೆ ಅಕ್ರಮ ನೀರಾವರಿ ತಡೆಗೆ ನೀಡಲಾಗಿರುವ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.