ರಾಯಚೂರು : ಕಳೆದ ಕೆಳ ದಿನಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಸುರಿದ ಮಹಾಮಳೆಯಿಂದ ನಾರಾಯಣಪುರ ಜಲಾಶಯ ತುಂಬಿ ಹರಿದಿದೆ. ಪರಿಣಾಮ ರೈತರು ಬೆಳೆದ ಬೆಳೆಯೆಲ್ಲ ನಾಶವಾಗಿ ರೈತರ ಬದುಕು ಬೀದಿಗೆ ಬರುವಂತಾಗಿದೆ.
ತಾಲೂಕಿನಲ್ಲಿ ಮಳೆ ಸುರಿಯದಿದ್ದರೂ ಮಹಾರಾಷ್ಟ್ರದಲ್ಲಿನ ಕೊಯ್ನಾ ಡ್ಯಾಂನಿಂದ ನಾರಾಯಣಪುರ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟ ಪರಿಣಾಮ ಪ್ರವಾಹ ಉಂಟಾಗಿ ನೂರಾರು ಎಕರೆ ಫಲವತ್ತಾದ ಬೆಳೆ ನಾಶವಾಗಿದೆ. ಸಾಲ ಸೋಲ ಮಾಡಿ ನಾಟಿ ಮಾಡಿದ ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಗಳು ರೈತರ ಕಣ್ಣ ಮುಂದೆಯೇ ಸಂಪೂರ್ಣ ನಾಶವಾದ ಕಾರಣ ರೈತರು ಕಂಗೆಟ್ಟಿದ್ದಾರೆ.
ತಾಲೂಕಿನ ಡೊಂಗರಾಂಪೂರ ಒಂದರಲ್ಲಿಯೇ ಸುಮಾರು 150 ಎಕರೆ ಬೆಳೆ ನಾಶವಾಗಿದೆ. ಹೊಳೆ ದಂಡೆಯಲ್ಲಿನ ಬೆಳೆಗಳಿಗೆ ನೀರು ನುಗ್ಗಿದ ಪರಿಣಾಮ ಕಾಯಿ ಬಿಟ್ಟ ಹತ್ತಿ, ಮೆಣಸಿನಕಾಯಿ ಬೆಳೆ, ನಾಟಿ ಮಾಡಿದ ಭತ್ತ ನಾಶವಾಗಿ ರೈತರ ಕಣ್ಣಲ್ಲಿ ನೀರು ತರಿಸಿದಲ್ಲದೆ ಮುಂದೇನು ಮಾಡಬೇಕೆಂದು ಚಿಂತೆಗೆ ದೂಡಿದೆ. ಸತತ ಮೂರ್ನಾಲ್ಕು ವರ್ಷಗಳಿಂದ ಕೆಂಗೆಟ್ಟಿದ್ದ ರೈತರಿಗೆ ಈ ವರ್ಷದ ಆರಂಭಿಕ ಮುಂಗಾರು ಹಲವು ಕನಸು ಕಾಣುವಂತೆ ಮಾಡಿತ್ತು. ಆದ್ರೆ ಮಹಾರಾಷ್ಟ್ರದಲ್ಲಿ ಸುರಿದ ಮಳೆ, ಪ್ರವಾಹ ದಿಂದಾಗಿ ಇಲ್ಲಿನ ರೈತರ ಹೊಟ್ಟೆಯ ಮೇಲೆ ಕಲ್ಲು ಹಾಕಿದೆ.
ಮಹಾಮಳೆಯಿಂದ ಅನೇಕ ಜನರು ಮನೆಮಠ ಕಳೆದು ಕೊಂಡಿದ್ದಲ್ಲದೆ ಹಲವರು ಗಂಜಿ ಕೇಂದ್ರದಲ್ಲಿ ಆಸರೆ ಪಡೆದರೆ, ಹಲವರು ಬೆಳೆ ನಾಶದಿಂದಾಗಿ ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ. ಫಲವತ್ತಾದ ಬೆಳೆ ನಾಶವಾಗಿದ್ದು, ಈಗ ಮುಂದೇನು ಎಂದು ರೈತರನ್ನು ಕೇಳಿದರೆ, ಏನು ಮಾಡಬೇಕು. ಸಾಲ ಮಾಡಿ ತಿಂಗಳು ಗಟ್ಟಲೇ ಹಗಲಿರುಳು ದುಡಿದ ಲಕ್ಷಾಂತರ ರೂ.ಖರ್ಚು ಮಾಡಿದ್ದೇವೆ. ಈಗ ಬೆಳೆ ನಾಶವಾಗಿದೆ. ಅಧಿಕಾರಿಗಳು ಬರ್ತಾರೆ, ಆದ್ರೆ ಅವರು ಕೊಡುವ ಬಿಡಿಗಾಸು ಯಾವುದಕ್ಕೂ ಸಾಲಲ್ಲ. ಹಾಳಾದ ಬೆಳೆ ನೆಲಸಮ ಮಾಡಿ ಪುನಃ ಬೆಳೆ ಹಾಕಬೇಕು. ಇದಕ್ಕೆಲ್ಲ ಹಣ ಎಲ್ಲಿಂದ ತರಬೇಕು. ದಿಕ್ಕು ತೋಚದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.