ರಾಯಚೂರು: ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವೇಳೆ ಮಳೆ ಸುರಿದಿದೆ.
ನಗರದಲ್ಲಿ ಕೆಲಕಾಲ ಜೋರಾಗಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ರಾಜಕಾಲುವೆಗಳಲ್ಲಿ ಮಳೆ ನೀರು ತುಂಬಿ ಚರಂಡಿ ನೀರು ರಸ್ತೆಗೆ ಹರಿದರೆ, ಕೆಲವು ಕಡೆ ರಸ್ತೆ ಮೇಲಿನ ತಗ್ಗು ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯಬೇಕಾಗಿತ್ತು. ಆದರೆ ಆಕಾಶದಲ್ಲಿ ನಿತ್ಯ ಬೃಹತ್ ಮೋಡಗಳು ಆವರಿಸಿ, ಮೋಡ ಕವಿದ ವಾತಾವರಣ ನಿರ್ಮಾಣವಾಗಿರುತ್ತಿತ್ತು. ಇಂದು ಕೆಲಕಾಲ ಮೋಡಗಳು ಮಳೆಯಾಗಿ ಧರೆಗೆ ಇಳಿದಿದ್ದು, ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ.