ರಾಯಚೂರು: ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಕೃಷ್ಣಾ ನದಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆದ ಭತ್ತದ ಬೆಳೆ ನೀರಿಲ್ಲದೆ ಒಣಗುತ್ತಿದೆ.
ಭತ್ತದ ಬೆಳೆಗೆ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆಯಿದೆ. ಆದರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಗಳಲ್ಲಿ ಪಂಪ್ಸೆಟ್ ಇಡಲು ರೈತರಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ನದಿ ನೀರನ್ನು ಬೆಳೆಗೆ ಬಳಸಿಕೊಳ್ಳಲು ಸಾಧ್ಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸೊಂಪಾಗಿ ಬೆಳೆದು ನಿಂತಿರುವ ಭತ್ತದ ಬೆಳೆ ಒಣಗುತ್ತಿದೆ. ಜಿಲ್ಲೆಯ ಕಾಡ್ಲೂರು ತಾಲೂಕು ಸೀಮಾಂತರ ವ್ಯಾಪ್ತಿಯ ನದಿ ತೀರದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಬೆಳೆಗೆ ಸಂಪರ್ಕವಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ.
ಜಿಲ್ಲೆಯ ಸುಮಾರು 183 ಕಿ.ಮೀ.ವರೆಗೆ ಹರಿಯುವ ನದಿಯ ತೀರದಲ್ಲಿ ಗಡ್ಡೆಯ ಮೇಲೆರುವ ಭತ್ತದ ಗದ್ದೆಗಳಿಗೆ ಪಂಪ್ ಸೆಟ್ ಮೂಲಕವೇ ನೀರು ಕಟ್ಟಲಾಗುತ್ತದೆ. ಆದರೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ, ನದಿಗೆ ಆಳವಡಿಸಿರುವ ಪಂಪ್ ಸೆಟ್ ಕೊಚ್ಚಿಕೊಂಡು ಹೋಗುತ್ತವೆ ಎಂಬ ಭೀತಿ ರೈತರನ್ನು ಕಾಡುತ್ತಿದೆ. ಆದ್ದರಿಂದ ನದಿಯಲ್ಲಿರುವ ಪಂಪ್ ಸೆಟ್ಗಳನ್ನು ರೈತರು ತೆಗೆಯುತ್ತಿದ್ದಾರೆ. ಇದರಿಂದಾಗಿ ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.