ರಾಯಚೂರು : ಜಿಲ್ಲೆಯ ಜನರ ಕುಂದು ಕೊರತೆಗಳ ನಿವಾರಣೆಗೆ ಜಿಲ್ಲಾಡಳಿತ ದಿಂದ ನಡೆಸಲಾಗುತ್ತಿದ್ದ ಜಿಲ್ಲಾ ಮಟ್ಟದ ಜನ ಸ್ಪಂದನ ಸಭೆ ಕಳೆದ ಕೆಲ ತಿಂಗಳಿನಿಂದ ನಡೆಯದ ಕಾರಣ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗದಂತಾಗಿದೆ.
ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನ ಸ್ಪಂದನ ಸಭೆ ಜನರ ಕಷ್ಟಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ನಿವಾರಣೆಗೊಳ್ಳುತ್ತಿತ್ತು. ಇದರಿಂದ ಅಧಿಕಾರಿಗಳ ವಿಳಂಬ ನೀತಿ ಸೇರಿದಂತೆ ಅನೇಕ ಸಮಸ್ಯಗಳಿಗೆ ಪರಿಹಾರ ವೇದಿಕೆಯಾಗಿತ್ತು. ಸದ್ಯ ನೂತನ ಜಿಲ್ಲಾಧಿಕಾರಿಯ ಆಗಮನದಿಂದ ಜನರ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ.
ಪ್ರತಿ ಮಂಗಳವಾರ ನಡೆಯುತಿದ್ದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ದೂರುದಾರರ ಸಮಸ್ಯೆಗೆ ಸ್ಪಂದಿಸಿ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತಿತ್ತು. ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಇದ್ದ ಸಮಯದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಜನಸ್ಪಂದನ ಸಭೆಯಲ್ಲಿ ಜಿಲ್ಲೆಯ ಹಲವಾರು ಜನರು ದೂರು ಸಲ್ಲಿಸುತಿದ್ದರು.
ಈ ಸಭೆಯಲ್ಲಿ ಕಂದಾಯ ಇಲಾಖೆಯ ಭೂ ವಿವಾಧ, ಹಣಪತ್ರ, ಖಾತಾ ನಕಲು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಸಮಸ್ಯೆ, ರಸ್ತೆ, ಚರಂಡಿ, ಆಸ್ತಿ, ಉದ್ಯೋಗ, ಸರಕಾರದಿಂದ ಸಾಲ ಸೌಲಭ್ಯ, ವಿದ್ಯುತ್, ನೀರು ಸೇರಿದಂತೆ ಎಲ್ಲ ಬಗೆಯ ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳಿಂದ ಪರಿಹಾರಕ್ಕೆ ಮೊರೆಯಿಡುತ್ತಿದ್ದರು. ಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ತರಾಟೆಗೆ ತೆಗೆದುಕೊಂಡು ಪರಿಹಾರ ನೀಡುತ್ತಿದ್ದರು.
ಡಿಸಿ ಗೌತಮ್ ಅವರ ವರ್ಗಾವಣೆಯ ನಂತರ ಬಂದ ಶರತ್ .ಬಿ ಅವರು ತಿಂಗಳ ಪ್ರತಿ ಮಂಗಳವಾರ ನಡೆಯುತಿದ್ದ ಜನ ಸ್ಪಂದನ ಸಭೆಯನ್ನು ತಿಂಗಳ ಮೂರನೇ ಮಂಗಳವಾರ ನಡೆಸಲು ಶುರುಮಾಡಿದರು. ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ನೀತಿ ಸಂಹಿತೆ, ಚುನಾವಣೆಯ ತಯಾರಿಯಲ್ಲಿ ಬ್ಯುಸಿಯಾಗಿ ಜನಸ್ಪಂದನೆ ಸಭೆ ನಡೆಸಲು ನಿರ್ಲಕ್ಷ್ಯವಹಿಸಿದರು. ಇತ್ತೀಚಿಗೆ ಅವರ ವರ್ಗಾವಣೆಯಾಯಿತು.
ಇತ್ತೀಚಿಗೆ ಡಿಸಿಯಾಗಿ ಬಂದ ಆರ್. ವೆಂಕಟೇಶ ಕುಮಾರ ಅವರು ಈವರೆಗೆ ಒಂದು ಸಭೆ ಮಾಡಿಲ್ಲ. ಇದರಿಂದ ಜನಸ್ಪಂದನ ಸಭೆಯ ಕಟಕಟೆ ಮುಚ್ಚಿಹೋದಂತಾಗಿದೆ. ರಾಜ್ಯಮಟ್ಟದ ದೂರುಗಳಿದ್ದರೆ ರಾಜ್ಯ ಸರಕಾರದ ಗಮನಕ್ಕೆ ತರುವ ಕೆಲಸವೂ ನಡೆಯುತಿತ್ತು . ಇದರಿಂದ ಸಿಎಂ ಅವರ ಗೃಹ ಕಚೇರಿ ಕೃಷ್ಣಾಕ್ಕೆ ಬರುತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗಿತ್ತು.
ಜನಸ್ಪಂದನ ಸಭೆ ಕುರಿತು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರನ್ನು ಈಟಿವಿ ಭಾರತ ದೂರವಾಣಿ ಸಂಪರ್ಕ ಮಾಡಿ ಕೇಳಿದರೆ. ಜನ ಸಂಪರ್ಕ ಸಭೆಯ ಬಗ್ಗೆ ಮಾಹಿತಿಯಿಲ್ಲ. ಜನರ ದೂರುಗಳನ್ನು ಆಲಿಸಲು ಸಮಯ ನಿಗದಿ ಮಾಡಿ ಸ್ಪಂದಿಸುತಿದ್ದೇನೆ. ಸರಕಾರ ಬದಲಾದ್ರೂ ಅಧಿಕಾರಿಗಳ ಕೆಲಸ ಬದಲಾಗಲ್ಲ. ಈ ಬಗ್ಗೆ ಗಮನಿಸಿ ಮುಂದೆ ನೋಡಲಾಗುವುದು ಎಂದು ಪ್ರತಿಕ್ರಿಯಿಸಿದರು.