ರಾಯಚೂರು : ಜಿಲ್ಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ತೆಪ್ಪ ಬಳಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಆದರೆ ಆತ್ಕೂರು ಗ್ರಾಮದಲ್ಲಿ ತೆಪ್ಪ ಬಳಕೆ ಮಾಡುತ್ತಿದ್ದು ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವುದು ಅನಿವಾರ್ಯವಾಗಿದೆ.
ಜನರ ಸುರಕ್ಷತೆಗಾಗಿ ತೆಪ್ಪೆ ಬಳಸದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಆದ್ರೆ ಆತ್ಕೂರು ಗ್ರಾಮದಿಂದ ಕುರ್ವಕಲಾ ಗ್ರಾಮಗಳಿಗೆ ಹೋಗುವ ಜನರು ತೆಪ್ಪವನ್ನು ಬಳಸುವುದು ಬಿಟ್ಟಿಲ್ಲ ಇವರಿಗೆ ಇದು ಅನಿವಾರ್ಯವೂ ಕೂಡ. ಶಾಲಾ ಮಕ್ಕಳು, ಕಾರ್ಮಿಕರು, ಯಾಪಲದಿನ್ನಿ, ರಾಯಚೂರಿಗೆ ಹೋಗಬೇಕಾದರೆ ಆತ್ಕೂರು ಗ್ರಾಮಕ್ಕೆ ಬಂದು ಇಲ್ಲಿಂದ ಬಸ್ ಮೂಲಕ ರಾಯಚೂರಿಗೆ ಹೋಗಬೇಕಾಗಿದೆ.
ಅಲ್ಲದೇ ಯಾಪಲದಿನ್ನಿಯಲ್ಲಿ ಸಂತೆ ಇರುವ ಕಾರಣ ಮತ್ತು ಕುರ್ವಕಲಾ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ದ ದತ್ತಾತ್ರೇಯ ದೇವಸ್ಥಾನವಿರುವ ಕಾರಣ ಜಿಲ್ಲೆ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರದರ್ಶನ ಪಡೆಯುತ್ತಾರೆ. ಸದ್ಯ ಕೃಷ್ಣಾ ನದಿ ಮೈದುಂಬಿಹರಿಯುತಿದ್ದು ಅಪಾಯಕ್ಕೆ ಗುರಿಯಾಗುವಂತಾಗಿದೆ. ಇದನ್ನು ಲೆಕ್ಕಿಸದೇ ಭಕ್ತರು ತೆಪ್ಪದ ಮೂಲಕ ದತ್ತಾತ್ರೆಯ ದೇವಸ್ಥಾನಕ್ಕೆ ತೆರಳಿದರು.
ಮೇಲ್ಸೇತುವೆ ಇದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ
ಕುರ್ವಕುಲಾ ಗ್ರಾಮಕ್ಕೆ ಹೋಗಲು ಮೇಲ್ಸೇತುವೆ ಕಾಮಗಾರಿ ಚಾಲನೆ ನೀಡಿ ಪಿಲ್ಲರ್ ಗಳೂ ಕಟ್ಟಿದರೂ ಕಾರಣಾಂತರಗಳಿಂದ ಅದು ಪೂರ್ಣವಾಗಿಲ್ಲ. ಇದರಿಂದ ಗ್ರಾಮಸ್ಥರು ತೆಪ್ಪದ ಮೂಲಕವೇ ಪ್ರಯಾಣಿಸುತಿದ್ದಾರೆ.
ಪ್ರವಾಹ ಬಂದಾಗ ಮಾತ್ರ ಕಣ್ಣು ಹಾಯಿಸಿ ನೋಡುವ ಜಿಲ್ಲಾಡಳಿತ ಸೇತುವೆ ನಿರ್ಮಾಣಕ್ಕೆ ಮುಂದಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಸದ್ಯ ಜೀವದ ಹಂಗು ತೊರೆದು ಉಕ್ಕಿ ಹರಿಯುವ ನೀರಿನಲ್ಲಿ ಪ್ರಯಾಣಿಸುತ್ತಿರುವ ಜನರಿಗೆ ಸರ್ಕಾರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟು ಅಪಾಯ ತಡೆಯಬೇಕಿದೆ.