ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಪಕ್ಷಿಪ್ರಿಯರ ಕಣ್ಣಿಗೆ ಹಬ್ಬವನ್ನುಂಟು ಮಾಡುವ ವಾತಾವರಣ ಸೃಷ್ಟಿಯಾಗಿದೆ.
ಮೊಬೈಲ್ ಟವರ್ ಹಾವಳಿ, ವಾಹನ, ವಿದ್ಯುತ್ ತಂತಿಗಳು ಹಾಗೂ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಪಕ್ಷಿ ಸಂಕುಲವೇ ಕಣ್ಮರೆಯಾದಂತಾಗಿತ್ತು. ಆದರೆ, ಸದ್ಯ ವಿಶೇಷ ವೈವಿಧ್ಯಮಯ ಜಾತಿಯ ಪಕ್ಷಿಗಳು ಜಿಲ್ಲೆಗೆ ವಲಸೆ ಬರುತ್ತಿವೆಯಂತೆ.
ಜಿಲ್ಲೆಯ ಹಲವೆಡೆ ಮರಿಗಳೊಂದಿಗೆ ಗೂಡು ತೊರೆದ ಪಕ್ಷಿಗಳ ಗೂಡ ಹುಡುಕಿ ತಂದು ಗೌರಮ್ಮ, ಸೀಗಮ್ಮ ಹಬ್ಬಗಳ ಆಚರಣೆ ಮಾಡುವುದು ಸಾಂಪ್ರದಾಯವಾಗಿ ಮಾರ್ಪಟ್ಟಿತ್ತು. ಆದರೆ, ಇದೀಗ ಮತ್ತೆ ಸುಮಾರು ಹದಿನೈದು ವರ್ಷಗಳ ನಂತರ ಹಸಿರು ಪರಿಸರ, ನೀರಿನ ಲಭ್ಯತೆ ಇರುವ ಕಡೆಗಳಲ್ಲಿ ಬಗೆ ಬಗೆಯ ಪಕ್ಷಿಗಳು ವಲಸೆ ಬಂದಿವೆ.
ವಿಧ ವಿಧವಾದ ಗೂಡು ಕಟ್ಟಿ ಪಕ್ಷಿ ಪ್ರಿಯರಿಗೆ ಸಂತಸ ತಂದಿವೆ. ಅದರಲ್ಲೂ ಪಕ್ಷಿಗಳು ಹುಲ್ಲುಕಡ್ಡಿ ತಂದು ತಮ್ಮ ಕೊಕ್ಕಿನಿಂದ ಗೂಡು ಹೆಣೆದುಕೊಳ್ಳುವ ಕೌಶಲ ವೀಕ್ಷಣೆ ಅದ್ಭುತ ಎನಿಸುತ್ತದೆ. ಪಕ್ಷಿಗಳು ಗೂಡು ಕಟ್ಟುವ ಕಲೆ ವೀಕ್ಷಿಸಲು ನಿತ್ಯ ನೂರಾರು ಯುವಕರು ಲಿಂಗಸುಗೂರು ಕೇಂಬ್ರಿಡ್ಜ್ ಶಾಲಾ ಆವರಣಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಿರುವುದು ಸಾಮಾನ್ಯವಾಗಿದೆ.