ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಜಾರಿ ಮಾಡಿರುವ ಲಾಕ್‌ಡೌನ್ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.
ರಾಯಚೂರು, ಸಿಂಧನೂರು ನಗರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಎರಡು ನಗರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಉಳಿದೆಡೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಲಾಕ್ ಡೌನ್ ಜಾರಿಯಲ್ಲಿರುವ ರಾಯಚೂರು, ಸಿಂಧನೂರು ನಗರಗಳಲ್ಲಿ ಜೀವನಾವಶ್ಯಕ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ತುರ್ತು ಸೇವೆಗಳು, ವೈದ್ಯಕೀಯ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ.
ಮನೆಯಿಂದ ಹೊರಗಡೆ ಬರದಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿವೆ. ಇದರ ನಡುವೆ ವಾಹನ ಸವಾರರು ಓಡಾಡುತ್ತಿರುವುದು ಕಂಡು ಬಂದ್ರೆ, ದಂಡ ವಿಧಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 26 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 814ಕ್ಕೆ ಏರಿದೆ. ಇವರಲ್ಲಿ 484 ಮಂದಿ ಗುಣಮುಖವಾಗಿ ಬಿಡುಗಡೆ ಆಗಿದ್ದರೆ, 318 ಪ್ರಕರಣಗಳು ಸಕ್ರಿಯವಾಗಿವೆ. ನಿನ್ನೆಯವರೆಗೆ ಒಟ್ಟು 12 ಜನ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.