ರಾಯಚೂರು: ದೇಶಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿಯನ್ನು ಆಚರಿಸಲಾಗುತ್ತಿದ್ದು, ರಾಯಚೂರು ಜಿಲ್ಲಾ ಪೊಲೀಸರು ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ. ನಗರದ ಆಶ್ರಯ ಕಾಲೋನಿಯಲ್ಲಿನ ಬಡ ಜನರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪೊಲೀಸರು ಮಾನವೀಯತೆ ಪ್ರದರ್ಶಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಯೊಂದಿಗೆ ಕುಶಲೋಪರಿ ನಡೆಸಿ ಕುಂದು ಕೊರತೆಯ ಬಗ್ಗೆ ಜನಸಂಪರ್ಕ ಸಭೆ ನಡೆಸಿದರು.
ಅಕ್ರಮ ಸಿಎಚ್ ಪೌಡರ್, ಮದ್ಯ ಮಾರಾಟದ ಬಗ್ಗೆ ಕೆಲ ದೂರುಗಳಿದ್ದು, ನಿಮ್ಮ ಬಡಾವಣೆಯಲ್ಲಿ ಇಂತಹ ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ದೂರು ನೀಡಿ ಎಂದು ಸಲಹೆ ನೀಡಿದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.