ರಾಯಚೂರು : ಎನ್‌ಆರ್‌ಬಿಸಿ 5ಎ ಕಾಲುವೆ ಯೋಜನೆ ಜಾರಿಗಾಗಿ ಆಗ್ರಹಿಸಿ ರೈತರು ಕಳೆದ 120 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಕೂಡ ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಸಂಪೂರ್ಣ ಕಡೆಗಣಿಸಿದೆ.
ನಾವು ಯಾವುದೇ ಕಾರಣಕ್ಕೂ ಮಸ್ಕಿ ಉಪ ಚುನಾವಣೆ ಬಹಿಷ್ಕಾರ ಮಾಡದೆ ಸರ್ಕಾರದ ವಿರುದ್ಧ ಮತ ಚಲಾವಣೆಗೆ ಕರೆ ನೀಡಲಾಗುವುದು ಎಂದು ಎನ್‌ಆರ್‌ಬಿಸಿ 5ಎ ಕಾಲುವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪುರ ಎಚ್ಚರಿಸಿದರು.
ನಗರದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿದ್ದ ಸಮಯದಲ್ಲಿ ಯಡಿಯೂರಪ್ಪ ಅವರು ಎನ್‌ಆರ್‌ಬಿಸಿ 5ಎ ಕಾಲುವೆ ಜಾರಿಗೊಳಿಸಿಯೇ ಮಸ್ಕಿ ಕ್ಷೇತ್ರದಲ್ಲಿ ಕಾಲಿಡುವೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ.
ಮಾತು ತಪ್ಪಿದ ಮುಖ್ಯಂತ್ರಿಗಳೀಗ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ನಾಳೆ ಮಸ್ಕಿ ಕ್ಷೇತ್ರಕ್ಕೆ ಆಗಮಿಸುವುದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಎನ್‌ಆರ್‌ಬಿಸಿ 5ಎ ಕಾಲುವೆ ಯೋಜನೆ ಜಾರಿಗಾಗಿ ಹೋರಾಟ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಅಲ್ಲದೇ, ಕಳೆದ 120 ದಿನಗಳಿಂದ ನಿರಂತರವಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದ ಪಾವನಕಲ್ಲೂರಿನಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡ ಈ ಹೋರಾಟವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ.
ಯಾವುದೇ ರೀತಿಯ ಮನವಿಗೆ ಬೆಲೆ ಇಲ್ಲದಂತಾಗಿದೆ. ಕ್ಷೇತ್ರವನ್ನು ಸ್ಪರ್ಧಿಸಿದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ರೈತರ ನೀರಾವರಿ ಯೋಜನೆ ಜಾರಿಗೊಳಿಸದೆ ಕುಂಟು ನೆಪ ಹೇಳುತ್ತಿರುವ ಸರ್ಕಾರ ಯೋಜನೆಯ ಸಾಧಕ-ಬಾಧಕ ಕುರಿತು ರೈತರೊಂದಿಗೆ ಬಹಿರಂಗ ಚರ್ಚೆಗೆ ವೇದಿಕೆ ಕಲ್ಪಿಸಲಿ.
ಮುಂಬರುವ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಮತ ಕೇಳುವ ನೈತಿಕತೆ ಇಲ್ಲ. ಈ ಪ್ರದೇಶದಲ್ಲಿ ಗುಳೆ ಸಮಸ್ಯೆ, ನಿರುದ್ಯೋಗ, ಬಡತನ ಸಮಸ್ಯೆಗಳಿಂದ ಜನರು ದಶಕಗಳಿಂದ ಬಳಲುತ್ತಿದ್ದಾರೆ. ಎನ್‌ಆರ್‌ಬಿಸಿ 5ಎ ಕಾಲುವೆ ಯೋಜನೆ ಜಾರಿಯೊಂದೇ ಈ ಸಮಸ್ಯೆಗೆ ಪರಿಹಾರ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಹೆಚ್ಚಳ: ಸರ್ಕಾರದ ಜೊತೆ ಕೈಜೋಡಿಸುವಂತೆ ಜನತೆಗೆ ಸಿಎಂ ಕರೆ
ಎನ್‌ಆರ್‌ಬಿಸಿ 5ಎ ಕಾಲುವೆ ಯೋಜನೆ ಜಾರಿಗೆ ತಡೆಯೊಡ್ಡಿರುವ ಸರ್ಕಾರದ ನಡೆ ಖಂಡಿಸಿ ಮಸ್ಕಿ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡದೆ ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡಲು ಹೋರಾಟ ಸಮಿತಿ ಕರೆ ನೀಡುತ್ತದೆ ಎಂದು ಬಸವರಾಜಪ್ಪಗೌಡ ಹರ್ವಾಪುರ ತಿಳಿಸಿದರು.