ರಾಯಚೂರು: ಅಪಾಯದ ಮಟ್ಟ ಮೀರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಜೀವದ ಹಂಗು ತೊರೆದು ಹತ್ತಾರು ಜನ ಸೇತುವೆ ದಾಟುತ್ತಿರುವ ದೃಶ್ಯ ರಾಯಚೂರು ಜಿಲ್ಲೆಯ ಕಂಡು ಬಂದಿದೆ.
ಲಿಂಗಸುಗೂರು ತಾಲೂಕಿನ ಜಲದುರ್ಗದಲ್ಲಿ ಹತ್ತಾರು ಜನರು ಗುಂಪಾಗಿ ಒಬ್ಬರನ್ನ ಒಬ್ಬರು ಹಿಡಿದುಕೊಂಡು ಹರಿಯುವ ನೀರಿನ ಮಧ್ಯ ಸೇತುವೆ ದಾಟಿದ್ದಾರೆ. ಮಹಾರಾಷ್ಟ್ರದ ಮಹಾ ಮಳೆಯಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿ ಬಿಟ್ಟಿದ್ದರು.
ಶೀಲಹಳ್ಳಿ, ಯರಗೋಡಿ ಹಾಗೂ ಜಲದುರ್ಗ ಸೇತುವೆ ಮುಳಗಡೆಗೊಂಡು ನಡುಗಡ್ಡೆ ಪ್ರದೇಶಗಳಿಗೆ ಜನಸಂಪರ್ಕ ಕಡಿತಗೊಂಡಿತ್ತು. ಜಲದುರ್ಗದಲ್ಲಿ ಹಲವು ಜನರು ಸಿಲುಕಿಕೊಂಡಿದ್ರು. ಸದ್ಯ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ನಾರಾಯಣಪುರ ಜಲಾಶಯದಿಂದ ಐದೂವರೆ ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಹತ್ತಾರು ಜನರು ಸೇತುವೆ ದಾಟುವ ದೃಶ್ಯ ಕಂಡು ಬಂದಿದೆ.