ರಾಯಚೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ಬರಗಾಲ ಆವರಿಸಿದ ಪರಿಣಾಮ ಬೆಳೆಗಳಿಗೆ ನೀರಿಲ್ಲದೇ ಜನರು, ರೈತರು ಪರದಾಡುವಂತಹ ಸ್ಥಿತಿ ಎದುರಾಗಿದೆ. ಈ ಸಮಸ್ಯೆ ಎರಡು ನದಿಗಳು ಹರಿಯುವ ರಾಯಚೂರಿಗೂ ಎದುರಾಗಿದೆ. ರಾಯಚೂರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ್ದರಿಂದ ನೀರಿನ ಬವಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲು ಮುಂದಾಗಿದ್ದು ಈ ಬಗ್ಗೆ ಇಂದು ಆದೇಶವನ್ನು ಹೊರಡಿಸಿದೆ.
ರಾಯಚೂರು ನಗರದಲ್ಲಿ ಒಟ್ಟು 33 ವಾರ್ಡ್ಗಳಿದ್ದು, ರಾಂಪುರ ಗ್ರಾಮದ ಬಳಿಯ ಕರೆಯಿಂದ ಹಾಗೂ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ರಾಂಪುರ ಕರೆಯಿಂದ ನಗರದ 23 ವಾರ್ಡ್ಗಳಿಗೆ, ಕೃಷ್ಣಾ ನದಿಯಿಂದ 12 ವಾರ್ಡ್ಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಸದ್ಯ ರಾಂಪುರ ಕರೆಯಲ್ಲಿ ಲಭ್ಯ ಇರುವ ನೀರಿನ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರಸಭೆ ತಿಳಿಸಿದೆ.
ಈ ಬಗ್ಗೆ ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯ ಮಾತನಾಡಿ, ನಗರದಲ್ಲಿ ಬರಗಾಲ ಆವರಿಸಿದ ಪರಿಣಾಮ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ನೀರು ಶುದ್ಧಿಕರಿಸಿ ಪೂರೈಕೆ: ರಾಯಚೂರು ನಗರದಲ್ಲಿ ಇತ್ತೀಚೆಗೆ ಕಲುಷಿತಗೊಂಡ ನೀರು ಸೇವಿಸಿ ಮೂರ್ನಾಲ್ಕು ಜನ ಮೃತಪಟ್ಟಿದ್ದ ಘಟನೆ ನಡೆದಿತ್ತು. ಆ ಘಟನೆ ಮರುಕಳಿಸದಂತೆ ಮುಂಜಾಗೃತೆ ಕ್ರಮ ವಹಿಸಲಾಗಿದ್ದು, ನೀರು ಶುದ್ಧಿಕರಿಸಿ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಅಲ್ಲದೇ ಈಗ ರಾಂಪುರ ಕೆರೆಯಲ್ಲಿರುವ ನೀರು ಖಾಲಿಯಾದ ಬಳಿಕ ಗಣೇಕಲ್ ಜಲಾಯಶದ ಮೂಲಕ ಕೆರೆಯನ್ನು ತುಂಬಿಸಲಾಗುತ್ತದೆ. ಸದ್ಯ ಕೆಳ ಭಾಗದ ರೈತರು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದು, ಹೀಗಾಗಿ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಹದ್ದುಬಸ್ತಿನಲ್ಲಿ ಕೆರೆ ತುಂಬಿಸಲಾಗುತ್ತದೆ ಎಂದು ಗುರುಸಿದ್ದಯ್ಯ ತಿಳಿಸಿದ್ದಾರೆ.
ಟ್ಯಾಂಕರ್ ಮೊರೆ ಹೋದ ರೈತರು: ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿನಕಾಯಿ ಬೆಳೆಗೆ ಹಾನಿಯಾಗುತ್ತಿರುವುದರಿಂದ ಅದನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ. ರಾಯಚೂರು ತಾಲೂಕಿನ ಆಶಾಪುರ ಗ್ರಾಮದ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಕೆರೆಯಿಂದ ಟ್ಯಾಂಕರ್ ಮೂಲಕ ನೀರನ್ನು ತಂದು ಬೆಳೆಗೆ ಹಾಯಿಸುತ್ತಿದ್ದಾರೆ.
ಇದನ್ನೂ ಓದಿ: ಮೊದಲು ಕೇಂದ್ರದಿಂದ ಹಣ ತರಲಿ, ಬಳಿಕ ಬರ ಅಧ್ಯಯನ ನಡೆಸಲಿ : ಬಿಜೆಪಿ ಸಚಿವ ಮಧು ಬಂಗಾರಪ್ಪ ಟಾಂಗ್