ರಾಯಚೂರು: ಹಾಲಿ ಸಂಸದ ಬಿ.ವಿ.ನಾಯಕ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾಣಿಸಲೇ ಇಲ್ಲ. ಅವರು ಗುಬ್ಬಿ ಹುಡುಕುವುದಕ್ಕೆ ಹೋಗಿದ್ದರು ಎಂದು ಸುರಪುರದ ಬಿಜೆಪಿ ಶಾಸಕ ರಾಜುಗೌಡ ಆರೋಪಿಸಿದ್ದಾರೆ.
ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾದ ಬಳಿಕ ಬಿ.ವಿ.ನಾಯಕ ಸರಿಯಾಗಿ ಕ್ಷೇತ್ರಗಳಿಗೆ ಭೇಟಿ ನೀಡಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯವಾಗಿಲ್ಲ. ಜನರ ಸಮಸ್ಯೆಗೆ ಸ್ಪಂದಿಸದೆ, ಜನರಿಗೆ ಮುಖವನ್ನೇ ತೋರಿಸದೆ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು.
ಸಂಸದರು ಕಳೆದ ಐದು ವರ್ಷ ಅಭಿವೃದ್ಧಿ ಕಾರ್ಯ ಮಾಡುವ ಬದಲಾಗಿ ಗುಬ್ಬಿ ಹುಡುಕುವುದಕ್ಕೆ ಹೋಗಿದ್ದರು. ಇಂತಹವರು ನಮಗೆ ಬೇಕಾ? ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಈ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಡಾ. ಶಿವರಾಜ್ ಪಾಟೀಲ್, ಹಾಲಪ್ಪ ಆಚಾರ್, ಮಾಜಿ ಶಾಸಕ ಮಾನಪ್ಪ ವಜ್ಜಲ್, ಮುಖಂಡರಾದ ಎನ್.ಶಂಕ್ರಪ್ಪ, ಬಸವರಾಜ ಪಾಟೀಲ್ ಅನ್ವರಿ ಸೇರಿದಂತೆ ಹಲವರು ಭಾಗವಹಿಸಿದ್ದರು.