ಲಿಂಗಸುಗೂರು : ಮಹಾರಾಷ್ಟ್ರದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದ ತಾಲೂಕಿನ ನೀರಲಕೇರಿ ಗ್ರಾಮದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ಜತೆಗ ಆತನ ಮೃತ ದೇಹದ ಗಂಟಲು ದ್ರವವನ್ನು ಲಿಂಗಸುಗೂರಲ್ಲಿ ಸಂಗ್ರಹಿಸಲಾಯಿತು.
ಮಂಗಳವಾರ ನೀರಲಕೇರಿ ಗ್ರಾಮಕ್ಕೆ ಮೃತದೇಹ ತರುವ ಮುಂಚೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಪತ್ತೆಗಾಗಿ ಡಾ. ದಿಗಂಬರ ನೇತೃತ್ವದ ತಂಡ ನಿಯಮಾನುಸಾರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಣೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಕೋವಿಡ್-19 ಅಟ್ಟಹಾಸ ಹೆಚ್ಚಿದೆ. ಮಂಡ್ಯದ ಪ್ರಕರಣದಿಂದ ನಾಗರಿಕರಲ್ಲಿ ಸಂಶಯಗಳು ಹುಟ್ಟಿಕೊಳ್ಳುವುದು ಬೇಡ ಎಂದು ಜಿಲ್ಲಾಧಿಕಾರಿ ನಿರ್ದೇಶನ ಮೇರೆಗೆ ಮರಣೋತ್ತರ ಪರೀಕ್ಷೆಗೊಳಗಾಗಿದ್ದ ಮೃತದೇಹದಿಂದ ಗಂಟಲು ದ್ರವ ಸಂಗ್ರಹಿಸಲಾಗಿದೆ.
ಲಿಂಗಸುಗೂರು ಆಸ್ಪತ್ರೆಯಲ್ಲಿ ಮೃತ ಅಮರೇಶ ಠಾಣೆ ಮೃತದೇಹದ ಗಂಟಲು ದ್ರವ ಸಂಗ್ರಹಿಸುತ್ತಿದ್ದಂತೆ ಗ್ರಾಮ ಪಂಚಾಯತ್, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳ ಸಮಕ್ಷಮ ಕೋವಿಡ್-19 ನಿಯಮ ಆಧರಿಸಿ ಮೃತದೇಹ ಸುಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಎ. ಲಕ್ಷ್ಮಪ್ಪ, ಸಿಪಿಐ ಯಸವಂತ ಬಿಸನಳ್ಳಿ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಉಪಸ್ಥಿತರಿದ್ದರು.