ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಐತಿಹಾಸಿಕ ಕೋಟೆ ಹಾಗೂ ನಡುಗಡ್ಡೆ ಗ್ರಾಮಗಳ ಸಂಪರ್ಕ ಕೊಂಡಿಯಾದ ಜಲದುರ್ಗ ಸೇತುವೆ ಅಪಾಯದ ಅಂಚಿನಲ್ಲಿದೆ.
ಕಳೆದ ವರ್ಷ ಕೃಷ್ಣಾ ನದಿ ಪ್ರವಾಹ ಸಂದರ್ಭದಲ್ಲಿ ದಾಖಲೆ ಪ್ರಮಾಣದ ನೀರು ನಾರಾಯಣಪುರ ಅಣೆಕಟ್ಟೆಯಿಂದ ಬಿಟ್ಟಿದ್ದಕ್ಕೆ ಸೇತುವೆ ಮೇಲ್ಭಾಗದ ಪ್ಯಾರಾಪಿಟ್ ವಾಲ್ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದೀಗ ಸೇತುವೆ ಪಿಲ್ಲರ್ಗಳ ಸುತ್ತಮುತ್ತ ಕಲ್ಲುಗುಂಡು, ಮಣ್ಣು ಕೊಚ್ಚಿ ಹೋಗಿ ಪಿಲ್ಲರ್ಗಳ ಬೇಸ್ಮೆಂಟ್ ಕಾಣಿಕೊಂಡು ಅಪಾಯದ ಮುನ್ಸೂಚನೆ ನೀಡುತ್ತಿವೆ.
ಸೇತುವೆ ಸ್ಲ್ಯಾಬ್ ಶಿಥಿಲಗೊಂಡಿರುವ ಬಗ್ಗೆ ಹಾಗೂ ತುಕ್ಕು ಹಿಡಿದ ಕಬ್ಬಿಣದ ಸರಳು ಜೋತಾಡುತ್ತಿರುವ ಬಗ್ಗೆ ಪ್ರಯಾಣಿಕರು ಭೀತಿಗೆ ಒಳಗಾಗಿದ್ದಾರೆ. ಅರ್ಧ ಶತಮಾನದಷ್ಟು ಹಿಂದೆಯೆ ನಿರ್ಮಾಣಗೊಂಡ ಈ ಸೇತುವೆ ಇದೀಗ ಅಪಾಯದ ಹಂತಕ್ಕೆ ಬಂದು ವರ್ಷವೇ ಕಳೆದಿದೆ. ಆದರೆ, ಯಾವೊಬ್ಬ ಅಧಿಕಾರಿಗಳು ಸಹ ಶಾಶ್ವತ ದುರಸ್ತಿಗೆ ಮುಂದಾಗಿಲ್ಲ. ವರ್ಷಕ್ಕೊಮ್ಮೆ ಇಲ್ಲಿ ಭೇಟಿ ನೀಡುವ ಅಧಿಕಾರಿ ವರ್ಗ ನಡುಗಡ್ಡೆ ಜನತೆಗೆ ಭರವಸೆ ನೀಡಿ ಹೋಗಿದ್ದು ಬಿಟ್ಟರೆ ಮತ್ತೇನು ಸೌಲಭ್ಯ ಕಲ್ಪಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತೆ ಅಣೆಕಟ್ಟೆಯಿಂದ ನೀರು ಬಿಡುವ ಮುನ್ಸೂಚನೆಗಳಿದ್ದು, ತಾಲ್ಲೂಕು ಆಡಳಿತ ಸೇತುವೆ ದುರಸ್ತಿಗೆ ಮುಂದಾಗಬೇಕು. ನಡುಗಡ್ಡೆ ಗ್ರಾಮ ಜನತೆಗೆ ನೀಡಿದ್ದ ಭರವಸೆಗಳ ಈಡೇರಿಕೆಗೆ ಮುಂದಾಗಿ ಪ್ರತಿ ವರ್ಷ ಪ್ರವಾಹ ನಿರ್ವಹಣೆ ಹೆಸರಲ್ಲಿ ವ್ಯರ್ಥ ಹಣ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಅಮರೇಶ ಜಲದುರ್ಗ ಒತ್ತಾಯಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಇಇ ಜಗದೇವ ಮೂರ್ತಿ ಅವರನ್ನು ಈಟಿವಿ ಸಂಪರ್ಕಿಸಿದಾಗ, ತಾವು ಹೊಸದಾಗಿ ನೇಮಕವಾಗಿದ್ದು, ಶಾಶ್ವತ ದುರಸ್ತಿ ಮಾಡುವ ಕುರಿತು ಮಾಹಿತಿ ಇಲ್ಲ. ಪ್ಯಾರಾಪಿಟ್ ವಾಲ್ ಗೆ 35ಲಕ್ಷ ಇಟ್ಟಿದೆ. ಆ ಕೆಲಸದ ಬಗ್ಗೆ ಆರೋಪಗಳು ಬಂದಿದ್ದು, ಪರಿಶೀಲಿಸುವೆ. ಕೂಡಲೆ ಫೋಟೊ ಸಮೇತ ಶಾಶ್ವತ ದುರಸ್ತಿಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಸ್ಪಷ್ಟಪಡಿಸಿದರು.