ರಾಯಚೂರು: ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮೊದಲ ಹಂತದಲ್ಲಿ ಜಿಲ್ಲೆಯ ಮಾನವಿ, ಸಿರವಾರ ಹಾಗೂ ದೇವದುರ್ಗ ತಾಲೂಕಿನ 93 ಗ್ರಾಮ ಪಂಚಾಯಿತಿಗಳಲ್ಲಿ 82 ಸೂಕ್ಷ್ಮ ಹಾಗೂ 767 ಮತಗಟ್ಟೆಗಳು ಸೇರಿದಂತೆ ಒಟ್ಟು 849 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪ್ರದೇಶಗಳಲ್ಲಿ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಪೊಲೀಸ್ ಅಧಿಕಾರಿಗಳು, 981 ಪೊಲೀಸ್ ಸಿಬ್ಬಂದಿ ಮತ್ತು 161 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ಮತದಾನದ ವೇಳೆ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಒಟ್ಟು 46 ಮೊಬೈಲ್ ಸೆಕ್ಟರ್, 17 ಸೂಪರ್ ವೈಸರ್ ಮೊಬೈಲ್ ಸೆಕ್ಟರ್ ಗಳಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ. 4 ಕೆಆರ್ಆರ್ಪಿ, 10 ಡಿಎಆರ್ ತುಕಡಿಯ ತುರ್ತು ಕಾರ್ಯಪಡೆ ನಿಯೋಜನೆ ಮಾಡಲಾಗಿದೆ.
ಜಿಲ್ಲೆಯ ಒಳಬರುವ ಮತ್ತು ಹೊರ ಹೋಗುವ ವಾಹನಗಳ ತಪಾಸಣೆ ಮಾಡಲು ಒಟ್ಟು 9 ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ ಎಂದು ಎಸ್ಪಿ ನಿಕ್ಕಂ ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಯ ಮನೆ ಮುಂದೆ ವಾಮಾಚಾರ:
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಮನೆಯಿಂದ ಮುಂದೆ ವಾಮಾಚಾರ ಮಾಡಿರುವ ಘಟನೆ ಜಿಲ್ಲೆಯ ರಾಯಚೂರು ತಾಲೂಕಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಅಭ್ಯರ್ಥಿ ವೀರಗಂಗಾಧರ ಮನೆಯ ಮುಂದೆ ಯಾರೋ ಕೆಂಪು ಬಟ್ಟೆಯಲ್ಲಿ ಲಿಂಬೆಹಣ್ಣು, ಕುಂಕಮ, ಕಟ್ಟಿ ಇಟ್ಟಿದ್ದಾರೆ. ಇದನ್ನು ಕಂಡು ಅಭ್ಯರ್ಥಿಯ ಕುಟುಂಬಸ್ಥರು ಗಾಬರಿಗೊಂಡಿದ್ದು, ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.