ರಾಯಚೂರು : ನೆರೆ ಸಂತ್ರಸ್ಥರಿಗೆ ಪರಿಹಾರ ನೀಡಬೇಕು, ಹಾಗೂ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ನಗರದ ಡಾ.ಬಿ.ಅರ್.ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣ, ನಗರಸಭೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮಟೆ ಬಾರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ಸಂದರ್ಭದಲ್ಲಿ ತಮಟೆಗೆ ರೈತ ಮಹಿಳೆ ಸ್ಟೆಪ್ಸ್ ಹಾಕಿ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ರೈತರ ಸಾಲಮನ್ನಾ ಮಾಡಬೇಕು, ನೆರೆ ಸಂತ್ರಸ್ಥರಿಗೆ ಪರಿಹಾರ ಮನೆ ನಿರ್ಮಿಸಬೇಕು, ವೈಟಿಪಿಎಸ್ನಲ್ಲಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಎಡಿಸಿ ಗೋವಿಂದರೆಡ್ಡಿ ಬಂದರೂ ಮನವಿ ನೀಡದ ರೈತರು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಕೊನೆಗೂ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೆಂಕಟೇಶ ಅವರು ರೈತ ಮುಖಂಡರ ಬೇಡಿಕೆಯನ್ನು ಆಲಿಸಿ ಮನವಿ ಪತ್ರ ಸ್ವೀಕರಿಸಿ ಜಿಲ್ಲಾಮಟ್ಟದ ಬೇಡಿಕೆಗೆ ಕ್ರಮ ಕೈಗೊಂಡು ರಾಜ್ಯ ಮಟ್ಟದ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.