ರಾಯಚೂರು: ಶಾಸಕರೇ ಲಂಚ ಕೊಟ್ಟು ಅಧಿಕಾರಿಗಳ ಬಳಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಅವರು ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಆರೋಪಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಮಾತನಾಡಿದ ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸವನಗೌಡ, ಕ್ಷೇತ್ರದಲ್ಲಿ ಜಿಲ್ಲಾಡಳಿತದಿಂದ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಕಾಮಗಾರಿಗಳು, ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಯವರು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ, ಜಿಲ್ಲಾಡಳಿತ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದರು.
ಓವರ್ ಲೋಡ್ ಮಾಡಿಕೊಂಡು ವಾಹನಗಳಲ್ಲಿ ಮರಳು ಸಾಗಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗೆ ಬರುವ ಅನುದಾನವೇ ಕಡಿಮೆಯಿದೆ. ಹತ್ತಿ ಹೊತ್ತು ಬರುವ ರೈತರ ಗಾಡಿಗಳಿಗೆ ದಂಡ ಹಾಕ್ತಾರೆ, ಆದರೆ ಮರಳು ಲಾರಿಗಳನ್ನು ಹಾಗೆಯೇ ಬಿಡುತ್ತಾರೆ ಎಂದು ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಕೆ. ಶಿವನಗೌಡ, ಶಾಸಕರೇ ಲಂಚಕೊಟ್ಟು ಅಧಿಕಾರಿಗಳ ಬಳಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ ಎಂದು ಆರೋಪಿಸಿದರು. ಇದಾದ ಬಳಿಕ ಆರ್ಟಿಓ ಅಧಿಕಾರಿಗಳನ್ನು ಡಿಸಿಎಂ ತರಾಟೆಗೊಂಡು, ಅಕ್ರಮದಲ್ಲಿ ನೀವು ಭಾಗಿಯಾಗಿದ್ದೀರಾ? ಯಾಕೆ ತಡೆಯುತ್ತಿಲ್ಲ? ಅಕ್ರಮಕ್ಕೆ ಬ್ರೇಕ್ ಬೀಳದಿದ್ದರೆ ಆರ್ಟಿಓ ಅಮಾನತು ಮಾಡುವ ಎಚ್ಚರಿಕೆ ನೀಡಿದರು.