ರಾಯಚೂರು: ಕೃಷ್ಣ ನದಿಯ ಪ್ರವಾಹದಿಂದ ಜಿಲ್ಲೆಯ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಂತಹ ಬೆಳೆ ಹಾಳಾಗಿದ್ದು,ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಯಾವುದೆ ಬೆಳೆ ನಷ್ಟ ಪರಿಹಾರ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಆಗಸ್ಟ್ ತಿಂಗಳಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನೆರೆಯಿಂದ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಬಿತ್ತನೆಯದಂತಹ ತೋಟಗಾರಿಕೆ, ರೇಷ್ಮೆ ಹಾಗೂ ಭತ್ತ, ಹತ್ತಿ, ಮೆಣಿಸಿಕಾಯಿ ಬೆಳೆಗಳು ಸೇರಿದಂತೆ ಒಟ್ಟು 7000 ರೈತರ 13,924.7 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷ್ಣ ನದಿಯಿಂದ ಲಿಂಗಸೂಗೂರು-453.4 ಹೆಕ್ಟರ್, ರಾಯಚೂರು-2091.65 ಹೆಕ್ಟರ್ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ಸಿಂಧನೂರು-110.33 ಹೆಕ್ಟರ್, ಮಾನವಿ-296 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.
ಆಗಸ್ಟ್ ತಿಂಗಳ ಪ್ರವಾಹಕ್ಕೆ ಪ್ರಾಥಮಿಕ ಹಂತದಲ್ಲಿ 16 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಆದಾಂಜಿಸಲಾಗಿತ್ತು. ಆದ್ರೆ ಇದೀಗ 2019 ಸೆ.7ರ ದಾಖಲೆಗಳ ಪ್ರಕಾರ 13,924.7 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ಮಾಡಲಾಗಿದೆ. ನೆರೆಯಿಂದ ಸಾವಿರಾರು ಹೆಕ್ಷೆರ್ ಪ್ರದೇಶದಲ್ಲಿ ಹಾನಿಯಾದ ರೈತರಿಗೆ ನಷ್ಟ ಪರಿಹಾರವನ್ನು ನೀಡಬೇಕು. ಆದ್ರೆ ಇದುವರೆಗೂ ಸರ್ಕಾರ ಬೆಳೆ ಹಾನಿ ಪರಿಹಾರ ಹಣವನ್ನು ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.