ರಾಯಚೂರು: ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕಾಂಶದ ತರಕಾರಿಗಳನ್ನು ಬೆಳೆದು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು ಎಂದು ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.
ಜಿಲ್ಲೆಯಲ್ಲಿ 2125 ಶಾಲೆಗಳಿವೆ. ಇದರಲ್ಲಿ 1517 ಸರ್ಕಾರಿ ಶಾಲೆಗಳಿದ್ದರೆ, 57 ಅನುದಾನಿತ, 545 ಅನುದಾನರಹಿತ ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕಿಚನ್ ಗಾರ್ಡನ್ ಮಾಡಲು ಯೋಜನೆ ರೂಪಿಸಲಾಗಿದೆ. ಆಯಾ ಶಾಲೆಗಳಲ್ಲಿ ಲಭ್ಯವಿರುವ ಜಾಗವನ್ನು ನೋಡಿಕೊಂಡು ಅನುಕ್ರಮವಾಗಿ 250, 500, 750, 1000 ಸ್ಕ್ವೇರ್ ಮೀಟರ್ನ ಅಳತೆಯಲ್ಲಿ ನುಗ್ಗೆಕಾಯಿ, ನಿಂಬೆಹಣ್ಣು, ಕರಿಬೇವು, ಕೊತ್ತಂಬರಿ ಸೊಪ್ಪು ಸೇರಿದಂತೆ ಪೌಷ್ಟಿಕಾಂಶಯುಕ್ತ ತರಕಾರಿ ಬೆಳೆಯುವ ಕಿಚನ್ ಗಾರ್ಡನ್ ಮಾಡಲು ಯೋಜನೆ ರೂಪುಗೊಂಡಿದೆ.
ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯ ಅನುದಾನದಲ್ಲಿ ತೋಟಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ತರಕಾರಿ ಬೆಳೆಯುವ ಚಿಂತನೆ ಮಾಡಿ, ಈಗಾಗಲೇ ಕೆಲ ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗಿದೆ.