ರಾಯಚೂರು: ಏಳು ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾ ವಿಭಾಗದ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ಸಿಯುಟಿಐ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬಿಎಸ್ಎನ್ಎಲ್, ಕ್ಯಾಶುವಲ್ ಕಂಟ್ರ್ಯಾಕ್ಟರ್ ಯೂನಿಯನ್ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ ಕಾರ್ಮಿಕರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು- ಕೊಪ್ಪಳ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಕಾರ್ಮಿಕರು ಸುಮಾರು 15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಕಾಯ್ದೆಯಡಿ ಯಾವುದೇ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ. ಈ ಕುರಿತು ಹಲವು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.
ಬೋನಸ್, ಕನಿಷ್ಠ ಕೂಲಿ, ಭವಿಷ್ಯ ನಿಧಿ, ವಾರ್ಷಿಕ ವರದಿ ಹಾಗೂ ಗುರುತಿನ ಚೀಟಿ ಇತರೆ ಸೌಲಭ್ಯ ನೀಡಿಲ್ಲ. 7 ತಿಂಗಳ ಬಾಕಿ ವೇತನ ಪಾವತಿಸದ ಕಾರಣ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಇದು ಹೀಗೆ ಮುಂದುವರಿದರೆ ನಾವು ಬೀದಿಗೆ ಬರುತ್ತೇವೆ ಎಂದು ಅಳಲು ತೋಡಿಕೊಂಡರು.
ಮೈಸೂರಿನ ಗುತ್ತಿಗೆ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳಲು ನ್ಯಾಯಾಲಯ ಆದೇಶ ನೀಡಿದ್ದು, ಬೆಂಗಳೂರಿನ ಬಿಎಸ್ಎನ್ಎಲ್ ಮುಖ್ಯ ಪ್ರಬಂಧಕರು ಆದೇಶ ಪ್ರತಿ ತಲುಪಿಸಿದ್ದಾರೆ. ಆದ್ರೆ ರಾಯಚೂರು ವಿಭಾಗದ 41 ಕಾರ್ಮಿಕರನ್ನು ಯಾವುದೇ ಮಾಹಿತಿ ನೀಡದೇ ಕೆಲಸದಲ್ಲಿ ನಿರಾಕರಿಸಲಾಗಿದೆ. ಇದರಿಂದ ಗುತ್ತಿಗೆ ಕಾರ್ಮಿಕರಿಗೆ ತೀವ್ರ ಅನ್ಯಾಯವಾಗಿದೆ ಎಂದು ಖಂಡಿಸಿದರು.