ರಾಯಚೂರು : ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಕೇರಳದ ಆಟೋಡ್ರೈವರ್‌ವೊಬ್ಬರ ಪುತ್ರಿ 6 ಚಿನ್ನದ ಪದಕಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಕೆ. ಸುರೇಶ್ ಕುಮಾರ್ ಎಂಬುವರ ಪುತ್ರಿ ಗೀತಾ ಟಿ ವಿ ಅವರು ಪದವಿಯಲ್ಲಿ 6 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಇಂದು ನಡೆದ 11ನೇ ಘಟಿಕೋತ್ಸವ ಸಮಾರಂಭಕ್ಕೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ನಂತರ ಅವರು ಸಾಧಕಿಗೆ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಾಧಕಿ ಗೀತಾ ಟಿ ವಿ ಅವರು, 'ನನಗೆ ಚಿನ್ನದ ಪದಕ ಬಂದಿರುವುದು ತುಂಬಾ ಸಂತೋಷವಾಗಿದೆ. ನಾನು ಕೇರಳ ರಾಜ್ಯದಿಂದ ಬಂದಿದ್ದೇನೆ. ನನ್ನ ಈ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರ ಪ್ರೋತ್ಸಾಹವೇ ಕಾರಣ. ಈ ಸಂದರ್ಭದಲ್ಲಿ ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ' ಎಂದರು.
'ನನ್ನ ತಂದೆ ಆಟೋ ಚಾಲಕರಾಗಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ನನ್ನ ಈ ಸಾಧನೆಗೆ ಅವರ ಕೊಡುಗೆ ಅಪಾರ. ಹೀಗಾಗಿ, ಈ ಸಾಧನೆಯ ಕೀರ್ತಿ ಅವರಿಗೆ ಸಲ್ಲಬೇಕು ಎಂದ ಅವರು, ಮುಂದೆ ಪ್ರಾಧ್ಯಾಪಕಿ ಆಗುವ ಕನಸು ಹೊಂದಿದ್ದೇನೆ' ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ 303 ಸ್ನಾತಕ, 107 ಸ್ನಾತಕೋತ್ತರ, 26 ಡಾಕ್ಟರೇಟ್ ಪದವಿಗಳನ್ನ ಪ್ರದಾನ ಮಾಡಲಾಗಿದೆ. ಸ್ನಾತಕ ಪದವಿಯಲ್ಲಿ 21 ಚಿನ್ನದ ಪದಕ, ಸ್ನಾತಕೋತ್ತರ ಪದವಿಗೆ 14 ಚಿನ್ನದ ಪದಕ, 10 ಡಾಕ್ಟರೇಟ್ ಪದವೀಧರರಿಗೆ ಚಿನ್ನದ ಪದಕಗಳನ್ನ ನೀಡಲಾಯಿತು.
ಓದಿ: ಶೇ.90ರಷ್ಟು ಜನ 2ನೇ ಡೋಸ್ ಪಡೆದರೆ 3ನೇ ಅಲೆ ತಡೆಯಬಹುದು : ಸಚಿವ ಸುಧಾಕರ್