ರಾಯಚೂರು : ಕಾಂಗ್ರೆಸ್‌ನ ರಾಹುಲ್ ಗಾಂಧಿಗೆ ಬುದ್ಧಿ ಭ್ರಮಾಣೆಯಾಗಿದೆ ಅನಿಸುತ್ತೆ. ಯಾರೋ ಬರೆದುಕೊಟ್ಟಿರುವುದನ್ನು ಓದುತ್ತಾರೆ. ಇಂತಹ ನಾಯಕ ಕಾಂಗ್ರೆಸ್ ಪಕ್ಷದಲ್ಲಿರುವುದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪಾರ್ಟ್‌ಟೈಮ್ ರಾಜಕಾರಣಿ. ಯಾರೋ ಬರೆದುಕೊಟ್ಟಿದ್ದನ್ನು ಓದುತ್ತಾರೆ. ಮೇಕ್ ಇನ್ ಇಂಡಿಯಾಗೆ ರೇಪ್ ಇನ್ ಇಂಡಿಯಾವನ್ನು ಹೋಲಿಕೆ ಮಾಡಿರುವುದನ್ನು ನೋಡಿದರೆ ಅವರ ಮೆಚ್ಯುರಿಟಿಗೆ ಸಿಂಪತಿ, ಕರುಣೆ ವ್ಯಕ್ತಪಡಿಸುತ್ತೇನೆ ಎಂದರು.
ಬುದ್ದಿ ಇಲ್ಲದಿರುವ ನಾಯಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವವರು. ಸ್ವಲ್ಪನಾದರೂ ಅರಿವಿರಬೇಕು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗೇ ಆ ಪಕ್ಷದ ನಾಯಕ ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಎಂದು ಹೇಳಿಕೆ ನೀಡಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಪೌರತ್ವ ಮಸೂದೆ ಜಾರಿ ಕುರಿತಂತೆ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಡಿ. 2014ರವರೆಗೆ ಭಾರತದೊಳಗೆ ಬಂದವರಿಗೆ ದೇಶದ ನಾಗರಿಕರೆಂದು ಖಾತರಿ ಪಡಿಸುವ ಮೂಲಕ ಸೌಲಭ್ಯ ಹೆಚ್ಚಿಸುವುದು ಇದರ ಉದ್ದೇಶ. ಆದರೆ, ಈ ಬಗ್ಗೆ ತಪ್ಪು ಕಲ್ಪನೆ ಬಿತ್ತುವ ಕಾರ್ಯವನ್ನು ಕೆಲ ಪಕ್ಷಗಳು ಮಾಡುತ್ತಿವೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಷಗಳ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಮಳೆ ಮತ್ತು ಪ್ರವಾಹದ ಕಾರಣಕ್ಕೆ ಕಲ್ಲಿದ್ದಲು ಉತ್ಪಾದನೆ ಶೇ.5ರಷ್ಟು ಕಡಿಮೆಯಾಗಿದೆ. ಬರುವ ಬೇಸಿಗೆಯಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ಈಗಿನಿಂದಲೇ ಆಯಾ ರಾಜ್ಯಗಳು ಕಲ್ಲಿದ್ದಲು ಸಂಗ್ರಹಣೆ ಹೆಚ್ಚಿಸಿಕೊಳ್ಳಬೇಕು. ವಿದೇಶದಿಂದ ಕಲ್ಲಿದ್ದಲು ಆಮದಿಗೆ ಶೀಘ್ರ ಕಡಿವಾಣ ಹಾಕಲಾಗುವುದು. ಸ್ಥಳೀಯವಾಗಿಯೇ ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ. ಕರ್ನಾಟಕ ರಾಜ್ಯಕ್ಕೆ ನೀಡಿದ್ದ ಕಲ್ಲಿದ್ದಲು ಗಣಿ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಅದರ ಇತ್ಯರ್ಥಕ್ಕೆ ಕೇಂದ್ರ ಶ್ರಮಿಸುತ್ತಿದೆ ಎಂದರು.