ರಾಯಚೂರು: ಲಿಂಗಸುಗೂರು ತಾಲೂಕಿನ ಗೋನವಾಟ್ಲ ಗ್ರಾಮ ಲೆಕ್ಕಾಧಿಕಾರಿ ಧರಿಯಪ್ಪ ಮಾಳಿ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಬೆಳೆ ಪರಿಹಾರ ಡಾಟಾ ಎಂಟ್ರಿ ಮಾಡುವಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಜಮೀನು ಮಾಲೀಕರ ಖಾತೆಗೆ ಹಣ ಪಾವತಿಸದೆ ಗ್ರಾಮ ಲೆಕ್ಕಾಧಿಕಾರಿ ಧರಿಯಪ್ಪಮಾಳಿ ತಮ್ಮ ಸ್ವಂತ ಖಾತೆಗೆ 73,999 ರೂ. ಪಾವತಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ರೀತಿ ಗ್ರಾಮ ಲೆಕ್ಕಾಧಿಕಾರಿ ಇತರೆ ಜಮೀನು ಮಾಲೀಕರ ಖಾತೆಗೆ ಹಾಕುವ ಹಣವನ್ನು ತಮ್ಮ ಸಹೋದರ ರವಿಮಾಳಿ ಅವರ ಖಾತೆಗೆ 46,999 ರೂ. ಪಾವತಿಸುವ ಮೂಲಕ ವಂಚಿಸಿದ್ದಾರೆ ಎನ್ನಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಮತ್ತು ಆತನ ಸಹೋದರನ ಹೆಸರಿನ ಖಾತೆಗೆ ಹಣ ಪಾವತಿಸಿಕೊಂಡು ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ತಹಶೀಲ್ದಾರ್ ಚಾಮರಾಜ ಪಾಟೀಲ್ ನೀಡಿದ ದೂರಿನ ಮೇಲೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.