ರಾಯಚೂರು: ಗುಲ್ಬರ್ಗಾ ವಿ.ವಿಯ ಬಿ.ಎ ಅಂತಿಮ ವರ್ಷದ ಪ್ರಶ್ನೆ ಪತ್ರಿಕೆ ಅದಲು ಬದಲಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಗೊಂದಲ ಉಂಟಾಗಿತ್ತು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯದ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು.
ಲಿಂಗಸುಗೂರಿನ ಒಳಬಳ್ಳಾರಿ ಚೆನ್ನಬಸವೇಶ್ವರ, ಎಸ್ಎಂಎಲಬಿ ಪದವಿ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಹಿಸ್ಟಾರಿಕಲ್ ಡೆವಲಪ್‌ಮೆಂಟ್ ಆಫ್ ಎಜ್ಯುಕೇಷನ್ ವಿಷಯದ ಬದಲು ಮೆಶರ್ಮೆಂಟ್ ಆ್ಯಂಡ್ ಇವ್ಯಾಲ್ವೇಷನ್ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು.
ಈ ಬಗ್ಗೆ ಕಾಲೇಜುಗಳ ಪ್ರಾಚಾರ್ಯರು ಹಾಗು ಉಪನ್ಯಾಸಕರು ಮೌಲ್ಯಮಾಪನ ಮತ್ತು ಉಪ ಕುಲಪತಿಗಳ ಗಮನ ಸೆಳೆಯಲು ತಾಸುಗಟ್ಟಲೆ ಪರದಾಡಿದ್ದರು. ಈ ಬಗ್ಗೆ 'ಈಟಿವಿ ಭಾರತ' ವರದಿ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ವಿವಿ ಅಧಿಕಾರಿಗಳು, ಬದಲಿ ಪ್ರಶ್ನೆಪತ್ರಿಕೆ ಕಳುಹಿಸಿ ತಡವಾದ ಸಮಯವನ್ನು ಮುಂದುವರೆಸಲು ಸೂಚಿಸಿದಾಗ ವಿದ್ಯಾರ್ಥಿ ಸಮೂಹ ಪರೀಕ್ಷೆ ಬರೆದು ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿ: ಗುಲ್ಬರ್ಗ ವಿ.ವಿ.ಯಲ್ಲಿ ಪ್ರಶ್ನೆ ಪತ್ರಿಕೆ ಅದಲು-ಬದಲು; ಗೊಂದಲದಲ್ಲಿ ವಿದ್ಯಾರ್ಥಿ-ಶಿಕ್ಷಕ ಸಮೂಹ
ಈ ಬಗ್ಗೆ ವಿಸಿಬಿ ಕಾಲೇಜು ಪ್ರಾಚಾರ್ಯ ಪಿ. ಜಗದೀಶ ಮಾತನಾಡಿ, ಪ್ರಶ್ನೆ ಪತ್ರಿಕೆ ಬದಲಾಗಿದ್ದು ನಿಜ. ಮೊಬೈಲ್ ಸಂಪರ್ಕ ವಿಳಂಬವಾಗಿ ಒಂದು ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ಬಂದಿತ್ತು. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸಮಯ ಮುಂದುವರೆಸಿ ಪರೀಕ್ಷೆ ನಡೆಸಲಾಯಿತು ಎಂದು ಸ್ಪಷ್ಟಪಡಿಸಿದರು.