ರಾಯಚೂರು: ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಗಾದೆಯಿದೆ. ಆ ಗಾದೆಯಂತೆ, ಪತಿ - ಪತ್ನಿ ಜಗಳದ ನಡುವೆ ಪಾಪಿ ತಂದೆ ಮಗುವನ್ನು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಹತ್ತಿರದ ಕನಸಾವಿ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದೆ. ಅಭಿನವ (14 ತಿಂಗಳು) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಗು ಎಂದು ಗುರುತಿಸಲಾಗಿದೆ. ಮಹಾಂತೇಶ ಮಗುವನ್ನು ಕೊಲೆ ಮಾಡಿರುವ ತಂದೆಯಾಗಿದ್ದು, ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಭೀಮಮ್ಮಳಿಗೆ ಕಳೆದ ಮೂರು ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಆದಾಪುರ ಗ್ರಾಮದ ನಿವಾಸಿ ಮಹಾಂತೇಶ ಜೊತೆ ವಿವಾಹವಾಗಿತ್ತು. ಮದುವೆಯಾದ ಆರಂಭದ ಆರು ತಿಂಗಳವರೆಗೂ ಅನ್ಯೋನ್ಯವಾಗಿ ಇದ್ದರು. ಇದಾದ ನಂತರದ ದಿನಗಳಲ್ಲಿ ವಿನಾಕಾರಣ ನೆಪ ತೆಗೆದು ಹೊಡೆಯುವುದು, ಬಡಿಯುವುದು, ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಪತಿ ದೂರಿದ್ದಾಳೆ.
ಮಹಿಳೆ ನೀಡಿದ ದೂರಿನಲ್ಲೇನಿದೆ; ಗರ್ಭಿಣಿಯಾಗಿದ್ದಾಗ, ಪತಿ ಬೈದಾಡಿದ್ದರಿಂದ ಭೀಮಮ್ಮ ತವರು ಮನೆಗೆ ಬಂದಿದ್ದಳು. ತವರು ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ಭೀಮಮ್ಮ ತವರು ಮನೆಯಲ್ಲಿ ವಾಸವಿದ್ದಳು. ಪುನಃ ಮಗುವಿನೊಂದಿಗೆ ಗಂಡನ ಮನೆಗೆ ಹೋಗಿದ್ದಳು. ಆಗಲೂ ಪತಿ, ಅತ್ತೆ ಹಾಗೂ ಗಂಡ, ಆತನ ಅಣ್ಣ ಸೇರಿಕೊಂಡು ಚುಚ್ಚು ಮಾತುಗಳಿಂದ ಬೈಯ್ದಿದ್ದಾರೆ. ಅಲ್ಲದೇ ಈಕೆ ಚೆನ್ನಾಗಿಲ್ಲ, ಬೇರೆ ಹೆಣ್ಣನ್ನು ಮದುವೆ ಮಾಡಿಕೊಳ್ಳುವಂತೆಯೂ ಹೇಳಿದ್ದಾರೆ. ಮಗು ಇದ್ದರೆ ಆಸ್ತಿ ಕೊಡಬೇಕಾಗುತ್ತದೆ. ಮಗುವನ್ನು ಸಾಯಿಸಿ ಬಿಡುವಂತೆ ಮಗುವಿನ ತಂದೆಗೆ ಅತ್ತೆ ಪ್ರಚೋದನೆ ನೀಡಿದ್ದಾಳೆ ಎಂದು ದೂರಿದ್ದಾಳೆ.
ಹೀಗಾಗಿ ಕಳೆದ 2023 ಸೆ.3ರಂದು ರಾತ್ರಿ 9 ಗಂಟೆಗೆ ಕನಸಾವಿ ಗ್ರಾಮಕ್ಕೆ ಬಂದಿದ್ದ ಪತಿ ಮಹಾಂತೇಶ ಪತ್ನಿ ಭೀಮಮ್ಮಳೊಂದಿಗೆ ಜಗಳ ತೆಗೆದು ಮಗುವನ್ನು ಸಾಯಿಸುವುದಾಗಿ ಹೇಳಿ, ಕಸಿದುಕೊಳ್ಳಲು ಮುಂದಾಗಿದ್ದಾನೆ. ಆಗ ಅಲ್ಲಿಂದ ಭೀಮಮ್ಮ ತಾಯಿ, ತಂದೆ ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ, ಇದಾದ ಮಾರನೇ ದಿನ (ಸೆ.4) ಬೆಳಗಿನ ಜಾವ 1 ಗಂಟೆಗೆ ಬಂದು ಮಗುವನ್ನು ಕರೆದುಕೊಂಡು ಹೋಗಿ, ಮೂಗು, ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿ, ಕನಸಾವಿ ಅರಣ್ಯ ಪ್ರದೇಶದಲ್ಲಿ ಸಾಕ್ಷಿ ನಾಶ ಮಾಡುವುದಕ್ಕೆ ಮಗುವಿನ ಶವದ ಮೇಲೆ ಕಲ್ಲು ಇಟ್ಟಿದ್ದಾನೆ ಎಂದು ಮಗುವನ್ನು ಕಳೆದುಕೊಂಡ ತಾಯಿ ಮುಗದಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರ ತನಿಖೆಯಿಂದ ಪ್ರಕರಣ ಬಯಲಿಗೆ: ಪತಿಯೊಂದಿಗೆ ಜಗಳವಾಡಿದ ಪತಿ, ಬೆಳಗಿನ ಜಾವ ತೆಗೆದುಕೊಂಡು ಹೋಗಿದ್ದಾನೆ. ಮಗು ಕಾಣದೇ ಇದ್ದಾಗ ಆತಂಕಗೊಂಡ ತಾಯಿ ತನ್ನ ಪೋಷಕರೊಂದಿಗೆ ಹೋಗಿ, ಗಂಡನನ್ನು ವಿಚಾರಿಸಿದ್ದಾಳೆ. ಆಗ ಗಂಡ ಮನೆಯಲ್ಲಿ ಇಲ್ಲದಿದ್ದ ಕಾರಣ ಗಂಡನನ್ನು ಪತ್ತೆ ಹಚ್ಚಿ ಮಗುವನ್ನು ಹುಡುಕಿಕೊಡುವಂತೆ ಭೀಮಮ್ಮ ಠಾಣೆಯಲ್ಲಿ ದೂರು ನೀಡಿದ್ದಳು. ಆರೋಪಿ ಪತಿ ಮಹಾಂತೇಶನನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಸದ್ಯ ಮಗುವನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದ್ದು, ಆರೋಪಿ ಮಹಾಂತೇಶನನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ರಾಮನಗರ: ಜ್ಯೂಸ್ ಎಂದು ತಿಳಿದು ಕೀಟನಾಶಕ ಸೇವಿಸಿ ಎರಡು ವರ್ಷದ ಮಗು ಸಾವು.. ಪೋಷಕರ ಆಕ್ರಂದನ