ರಾಯಚೂರು: ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಅವರ ಅಮಾನತನ್ನು ರದ್ದುಗೊಳಿಸಿ, ಮರಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಪಿಎಸ್ಐ ನಿಂಗಪ್ಪ ಅಮಾನತು ರದ್ದುಗೊಳಿಸಿ ರಾಯಚೂರು ಗ್ರಾಮೀಣ ಠಾಣೆಯಿಂದ ಡಿಸಿಆರ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇತ್ತೀಚೆಗೆ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಸಿಎಂ ಗ್ರಾಮ ವಾಸ್ತವ್ಯಕ್ಕೆ ತೆರಳುವ ವೇಳೆ, ಸಿಎಂ ಪ್ರಯಾಣಿಸುತ್ತಿದ್ದ ಬಸ್ ಅಡ್ಡಗಟ್ಟಿ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ವೈಟಿಪಿಎಸ್ ಮತ್ತು ತುಂಗಭದ್ರಾ ಹಂಗಾಮಿ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ರು.
ಇದರಿಂದ ಸಿಎಂ ಗರಂ ಆಗಿದ್ದರು. ಹೀಗಾಗಿ ಸಿಎಂ ತೆರಳುವ ವೇಳೆ ಸೂಕ್ತ ಭದ್ರತಾ ಕ್ರಮ ಕೈಗೊಂಡಿಲ್ಲವೆಂದು ಗ್ರಾಮೀಣ ಠಾಣೆಯ ಪಿಎಸ್ಐ ನಿಂಗಪ್ಪರನ್ನು ಅಮಾನತು ಮಾಡಲಾಗಿತ್ತು. ಈ ಕ್ರಮವನ್ನು ವಿವಿಧ ಸಂಘಟನೆಗಳು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಪಿಎಸ್ಐ ನಿಂಗಪ್ಪ ಅಮಾನತು ಆದೇಶ ರದ್ದುಗೊಳಿಸಿ, ಮರಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದ್ರೆ ಗ್ರಾಮೀಣ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ.
ಇನ್ನು ಈ ಭದ್ರತಾ ಲೋಪವೆಸಗಿದ್ದ ಹಿನ್ನೆಲೆಯಲ್ಲಿ ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅವರನ್ನು ಸಹ ಅಮಾನತುಗೊಳಿಸಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಅವರ ಅಮಾನತನ್ನು ಸಹ ರದ್ದು ಮಾಡಲಾಗಿತ್ತು.