ರಾಯಚೂರು: ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿರುವುದನ್ನ ಖಂಡಿಸಿ ಹೈದರಾಬಾದ್-ಕರ್ನಾಟಕ ಶ್ರೀರಾಮುಲು ಅಭಿಮಾನಿ ಬಳಗದಿಂದ ಮಸ್ಕಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವಾಲ್ಮೀಕಿ ಸರ್ಕಲ್ನಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾಯಕ ಸಮುದಾಯದ ಪ್ರಭಾವಿ ನಾಯಕರಾಗಿರುವ ಶ್ರೀರಾಮುಲುಗೆ ಬಿಜೆಪಿಯಿಂದ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡಬೇಕಾಗಿತ್ತು. ಆದ್ರೆ ಬಿಜೆಪಿಯಿಂದ ಡಿಸಿಎಂ ಸ್ಥಾನವನ್ನ ನೀಡಿಲ್ಲ. ಇದರಿಂದ ನೋವುಂಟು ಆಗಿದ್ದು, ಕೂಡಲೇ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡಬೇಕೆಂದು ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಮನವಿ ಪತ್ರ ರವಾನಿಸಿದ್ರು.
ಇನ್ನು ಇದೇ ವೇಳೆ ಮಸ್ಕಿ ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷ ಮಹಾತೇಂಶ ನಾಯಕ, ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮಹ್ಮದ್ ರಫೀ ಹವಾಲ್ದಾರ್ ಸೇರಿದಂತೆ ಸದಸ್ಯರು ಹಾಗೂ ಪದಾಧಿಕಾರಿಗಳು ಆಯಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನ ಸಲ್ಲಿಸಿ, ಪಕ್ಷದ ಹೈಕಮಾಂಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.