ರಾಯಚೂರು : ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತುರುವಿಹಾಳ ಗ್ರಾಮದಲ್ಲಿ ಉಪಚುನಾವಣೆ ನಿಮಿತ್ತ ಜಾತಿವಾರು ಸಮೀಕ್ಷೆಯಲ್ಲಿ ಹಾಸನ ಹಾಗೂ ಶಿವಮೊಗ್ಗ ಮೂಲದ ವ್ಯಕ್ತಿಗಳು ಇಲ್ಲಿಗೆ ಬಂದು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ವಾರ್ಡ್ 1 ಮತ್ತು 2 ರಲ್ಲಿ ಉಪಚುನಾವಣೆ ನಿಮಿತ್ತ ಜಾತಿವಾರು ಸಮೀಕ್ಷೆಯಲ್ಲಿ ಹಾಸನ ಹಾಗೂ ಶಿವಮೊಗ್ಗ ಮೂಲದ ವ್ಯಕ್ತಿಗಳು ಇಲ್ಲಿಗೆ ಬಂದು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಒಬ್ಬರು ಮಹಿಳೆ, ಇಬ್ಬರು ಯುವಕರು ಹಾಗೂ ಕುರುಕುಂದಾ ಗ್ರಾಮದ ವ್ಯಕ್ತಿ ತುರುವಿಹಾಳ ಪೊಲೀಸ್ ಠಾಣೆಯ ಸುತ್ತಮುತ್ತಲಿನ ವ್ಯಾಪ್ತಿಯ ಬಡಾವಣೆಗಳಲ್ಲಿ ಯಾವ ಜಾತಿ ಜನ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಜನರನ್ನು ಕೇಳುತ್ತಾ, ಕೆಲವರಿಗೆ ಹಣ ಕೊಡುತ್ತಾ ಹೊರಟ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಜೊತೆಗೆ ಹಣ ಹಂಚಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪಿಎಸ್‌ಐ ಯರಿಯಪ್ಪ ಅಂಗಡಿ ಅವರು, ಸರ್ವೇ ಎಲ್ಲರೂ ಮಾಡಬಹುದು. ಹಣ ಹಂಚಿಕೆ ಮಾಡಿದ್ದರೆ ಅಂದ್ರೆ ಚುನಾವಣೆ ಆಯೋಗಕ್ಕೆ ದೂರು ಕೊಡಿ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಸಬ್‍ಇನ್‌ಸ್ಪೆಕ್ಟರ್ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೆಪಿಸಿಸಿ ರಾಜ್ಯ ಘಟಕದ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಆನಂತರ ಸಿಪಿಐ ಶ್ರೀಕಾಂತ ಅಲ್ಲೂರು ಹಾಗೂ ಪಿಎಸ್ಐ ಎರಿಯಪ್ಪ ಅಂಗಡಿ ಅವರು ಕಾಂಗ್ರೆಸ್ ಮುಖಂಡರ ಸಮಕ್ಷಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ವಿಚಾರಣೆ ನಡೆಸಿದರು.
ಇದೇ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರು ನಾವು ಬಡಾವಣೆಯಲ್ಲಿ ಯಾವ ಜಾತಿಯ ಜನ ಎಷ್ಟಿದ್ದಾರೆಂದು ಸರ್ವೇ ಮಾಡುತ್ತಿದ್ದೇವೆ. ಆದ್ರೆ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.