ರಾಯಚೂರು: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಹಣ ಪಾವತಿ ಸೇರಿದಂತೆ ರೈತರ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡಸಿದ ಪದಾಧಿಕಾರಿಗಳು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಹಣ ರೈತರಿಗೆ ಪಾವತಿಸಬೇಕು, ರೈತರ ಪಂಪ್ ಸೆಟ್ಗಳಿಗೆ ಹತ್ತು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು, ಮುಂಗಾರು ಬೆಳೆಗಳಾದ ಸಜ್ಜೆ ಸೇರಿದಂತೆ ಇತರೆ ಬೆಳೆಗಳ ಬೆಲೆ ಕುಸಿದಿದ್ದು, ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಬಹುತೇಕ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿಗೊಳಿಸಬೇಕು. ಹಿಂಗಾರು ಹಂಗಾಮಿಗೆ ಬೇಕಾದ ಎಲ್ಲ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಬೇಕು. ಮಾನ್ವಿ - ಸಿರವಾರ ತಾಲೂಕುಗಳ ತುಂಗಭದ್ರಾ ಎಡದಂಡೆ ನಾಲೆಯ ಉಪ ಕಾಲುವೆಗಳಿಗೆ ಕೊನೆಭಾಗದವರಿಗೆ ಸಮರ್ಪಕವಾಗಿ ನೀರನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಮುಖಂಡರಾದ ಅಮರಣ್ಣ ಗುಡಿಹಾಳ ದೊಡ್ಡಬಸವನಗೌಡ ಬಲ್ಲಟಗಿ, ಮಲ್ಲಣ್ಣ ದಿನ್ನಿ, ಸೂಗಯ್ಯ ಆರ್.ಎಸ್ ಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.