ರಾಯಚೂರು: ಕೋವಿಡ್ ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನ, ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಸ್ಥಾನಿಕ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಲಾಕ್ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಸಂಪೂರ್ಣ ಪಾವತಿಸಬೇಕು. ಕೋವಿಡ್ ಆರ್ಥಿಕ ಹಿಂಜರಿತ ನೆಪವಾಗಿಟ್ಟುಕೊಂಡು ವಜಾ, ವರ್ಗಾವಣೆ, ವೇತನ ಒಂಪ್ಪದದಲ್ಲಿನ ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು ಎಂದರು.
ರಾಜ್ಯ ಸರ್ಕಾರ ಘೋಷಿಸಿರುವ 2202 ಕೋಟಿ ರೂಪಾಯಿಗಳ ಪರಿಹಾರ ಅಸಂಘಟಿತ ವಲಯದ 5 ವಿಭಾಗಗಳಿಗೆ ಮಾತ್ರ ಸಂಬಂಧಪಟ್ಟಿದೆ. ಇನ್ನುಳಿದ 125ಕ್ಕೂ ಹೆಚ್ಚು ವಲಯಗಳ ಕೋಟ್ಯಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯ ಸಂಕಷ್ಟ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ಪಾಲು ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ವಿರುದ್ಧ ವೈದ್ಯರು, ಶೂಶ್ರೂಷಕಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿದಂತೆ ಇತರರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯಗಳು ವಿಸ್ತರಿಸಬೇಕು.
ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತಂದಿರುವುದನ್ನು ಕೈ ಬಿಡಬೇಕು ಸೇರಿದಂತೆ ಇತರೆ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.