ರಾಯಚೂರು: ಮಸ್ಕಿಯ ಹಿರೇಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿ ಚನ್ನಬಸವನನ್ನು ರಕ್ಷಿಸುವಲ್ಲಿ ಮಸ್ಕಿ ತಾಲೂಕಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲೆಯ ಪ್ರಗತಿಪರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಪಟ್ಟಣದ ಮಸ್ಕಿ-ಶ್ರೀರಂಗಪಟ್ಟಣ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಮಸ್ಕಿಯ ಹಿರೇಹಳ್ಳದಲ್ಲಿ ಬಹಿರ್ದೆಸೆಗೆ ಹೋಗಿದ್ದ ಇಬ್ಬರು ನೀರಿನಲ್ಲಿ ಸಿಲುಕಿಕೊಂಡಿದ್ದರು. ತಾಲೂಕಾಡಳಿತ ರಕ್ಷಣಾ ಕಾರ್ಯಾಚರಣೆಗೆ ಮುಂದಾದಾಗ ಅದಾಗಲೇ ತಡವಾಗಿತ್ತು. ಅದಾಗ್ಯೂ ಕಾರ್ಯಾಚರಣೆ ವೇಳೆ ಹಗ್ಗ ಹರಿದು ಚನ್ನಬಸವ ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಚನ್ನಬಸವ ಕೊಚ್ಚಿ ಹೋಗಿ ದಿನವೇ ಕಳೆದರೂ ಇನ್ನೂ ಆತ ಪತ್ತೆಯಾಗಿಲ್ಲ. ಈ ಹಿನ್ನೆಲೆ ತಾಲೂಕಾಡಳಿತ ಸೂಕ್ತ ಕಾರ್ಯಾಚರಣೆ ನಡೆಸಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಇದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು ಹಾಗೂ ಚನ್ನಬಸಪ್ಪ ತಾಯಿ, ಪತ್ನಿ ಪ್ರತಿಭಟಿಸಿ, ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದೆ.