ಲಿಂಗಸುಗೂರು(ರಾಯಚೂರು): ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ವಿರೋಧಿಸಿ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಪ್ರತಿಭಟನೆ ನಡೆಸಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ್ರಗೆ ಮನವಿ ಸಲ್ಲಿಸಿದ ನೌಕರರು ಬಾಕಿ ಉಳಿದ ವೇತನ ಮತ್ತು ಮೊಟ್ಟೆ ಖರೀದಿ ಹಣ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಪಡಿತರ ಹಂಚಿಕೆ ಮಾಡಬೇಕು ಎಂದು ಆಗ್ರಹ ಪಡಿಸಿದರು.
ಇನ್ನು ನಿವೃತ್ತಿ ಹೊಂದಿದ ನೌಕರರಿಗೆ ನೀಡಬೇಕಾದ ಇಡಿಗಂಟು ಹಣ, ಮೃತ ಕುಟುಂಬಕ್ಕೆ ಅಂದಿನ ದಿನವೇ ಶವ ಸಂಸ್ಕಾರದ ಹಣ ಪಾವತಿಸುವುದು ಸೇರಿದಂತೆ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಹಾಗೂ ನೌಕರರಿಗೆ ಸೇವಾಭದ್ರತೆ, ವೇತನ ಇತರ ಬೇಡಿಕೆಗಳ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.