ರಾಯಚೂರು: ಕೊರೊನಾ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಲು ಅನುದಾನರಹಿತ ಶಾಲೆಗಳಿಂದ ಶಿಕ್ಷಣ ಇಲಾಖೆ ಸಂಗ್ರಹಿಸಿರುವ ಶಿಕ್ಷಕರ ಕಲ್ಯಾಣ ನಿಧಿಯನ್ನು ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮುರಳಿಧರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆ ಶಿಕ್ಷಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಹಣಕಾಸಿನ ನೆರವಿನ ಅವಶ್ಯಕತೆ ಇದ್ದು, ಅನುದಾನರಹಿತ ಶಾಲೆಗಳಿಂದ ಶಿಕ್ಷಣ ಇಲಾಖೆ ಸಂಗ್ರಹಿರುವ ಶಿಕ್ಷಕರ ಕಲ್ಯಾಣನಿಧಿ ಹಾಗೂ ವಿದ್ಯಾರ್ಥಿಗಳ ಕಲ್ಯಾಣನಿಧಿ ಹಣವನ್ನು ಬಿಡುಗಡೆ ಮಾಡಿ ಖಾಸಗಿ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯದಲ್ಲಿ ಸುಮಾರು 50 ಸಾವಿರ ಅನುದಾನ ರಹಿತ ಖಾಸಗಿ ಶಾಲೆಗಳು ಇದ್ದು, 45 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದರು.
ಕೊರೊನಾ ಹಿನ್ನೆಲೆ ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಶುಲ್ಕ ಸಂಗ್ರಹವಾಗಿಲ್ಲ. ಹಾಗಾಗಿ ಶಿಕ್ಷಕರಿಗೆ ವೇತನ ಪಾವತಿಸಲು ಆಗುತ್ತಿಲ್ಲ. ಸರ್ಕಾರ ಶಾಲಾ ಶಿಕ್ಷಕರಲ್ಲಿ ತಾರತಮ್ಯ ಮಾಡದೇ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಮುಂದಾಗಬೇಕು. ಸರ್ಕಾರಿ ಶಾಲೆಗಳಿಗೆ ನೀಡುವ ಮನ್ನಣೆಯನ್ನು ಖಾಸಗಿ ಶಾಲೆಗಳಿಗೂ ನೀಡಬೇಕು. ಬಾಕಿ ಇವರು ಆರ್ಟಿಇ ಶುಲ್ಕ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರ ಸೂಚಿಸಿದ ಸಮಯದಲ್ಲಿ ಖಾಸಗಿ ಶಾಲೆಗಳನ್ನು ಆರಂಭಿಸಲಿದ್ದೇವೆ. ಆದರೆ ಸರ್ಕಾರ ಪ್ರವೇಶ ಶುಲ್ಕ ಪಾವತಿಗೆ ಪಾಲಕರಿಗೆ ಸೂಚಿಸಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಂಖಡರಾದ ಟಿ ಬಸವರಾಜ, ಹೆಚ್. ಶಫರುದ್ದೀನ್, ರಾಜು ತಾಳಿಕೋಟೆ ಉಪಸ್ಥಿತರಿದ್ದರು.