ರಾಯಚೂರು: ಜಿಲ್ಲೆಯ ಲಿಂಗಸುಗೂರು ಪುರಸಭೆ ವ್ಯಾಪ್ತಿ ಪ್ರದೇಶದ ವಾರ್ಡ್ ಮಟ್ಟದಲ್ಲಿ ದಿನಬಳಕೆಗೆ ಬೇಕಾದ ತರಕಾರಿ, ಹಣ್ಣು, ಹಾಲು ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ವತಿಯಿಂದ ಬಹುತೇಕ ವಾರ್ಡ್ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ನಾಗರಿಕರಿಗೆ ತೊಂದರೆ ಆಗದಿರಲು ಆಯಕಟ್ಟಿನ ಸ್ಥಳಗಳ ಪರಿಶೀಲನೆ ನಡೆಸಿ ತುರ್ತು ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇನ್ನು ದಿನೇ ದಿನೆ ಬಿಸಿಲು ಹೆಚ್ಚಾಗುತ್ತಲಿದ್ದು, ಕುಡಿಯುವ ನೀರಿನ ಕೆರೆ ಭರ್ತಿಮಾಡಿಕೊಂಡು ನಿಯಮಾನುಸಾರ ಸರದಿ ಆಧರಿಸಿ, ಶುದ್ಧ ಮತ್ತು ಸಮರ್ಪಕ ಕುಡಿವ ನೀರು ಪೂರೈಸಬೇಕು. ವಾರ್ಡಗಳ ಸ್ವಚ್ಛತೆ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ರಾಸಾಯನಿಕ ಸಿಂಪಡಣೆ ಮಾಡಿಸಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ, ಸಾಮಾಜಿಕ ಅರಣ್ಯಾಧಿಕಾರಿ ಬೀರಪ್ಪ, ಸಿಬ್ಬಂದಿ ವೆಂಕಟೇಶ, ಶಿವಲಿಂಗ ಮೇಗಳಮನಿ, ಬಸವರಾಜ ಪಾಲ್ಗೊಂಡಿದ್ದರು.