ರಾಯಚೂರು: ಹೈದರಾಬಾದ್ ಬಳಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನಾಲ್ಕು ಜನ ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದರು. ಇತ್ತ ಮೃತ ದೇಹಗಳ ಬರುವಿಕೆಗೆ ರಸ್ತೆಯಲ್ಲಿ ಕಾಯ್ದು ಕುಳಿತ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಹೈದರಾಬಾದ್ ಬಳಿಯ ಶಂಶಾಬಾದ್ ಬಳಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ಕು ಜನರನ್ನು ಹೈದರಾಬಾದ್ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ರಾಯದುರ್ಗ ಗ್ರಾಮದ ಶ್ರೀದೇವಿ (6), ರಂಗಪ್ಪ (25), ಶರಣಪ್ಪ (28), ಅಮರಪ್ಪ ಹಾಗೂ ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ಬಸಮ್ಮ, ಹನುಮಂತ ಹಾಗೂ ಬಾಗಲಕೋಟೆ ಜಿಲ್ಲೆಯ ಕಾಳಪ್ಪ ಮೃತಪಟ್ಟ ದುರ್ದೈವಿಗಳು ಎನ್ನಲಾಗಿದೆ.
ರಾಯದುರ್ಗ ಗ್ರಾಮದಲ್ಲಿ ಇಂದು ಬೆಳಗ್ಗೆಯಿಂದ ಮೃತದೇಹಗಳ ಬರುವಿಕೆಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಬಂಧಿಗಳು ಕಾಯುತ್ತಾ ಕುಳಿತ್ತಿದ್ದಾರೆ. ಹೈದರಾಬಾದ್ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಸಂಜೆವರೆಗೂ ಮರಣೋತ್ತರ ಪರೀಕ್ಷೆ ನಡೆಯುತಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಮಾಹಿತಿಯಿಂದ ತಿಳಿದು ಬಂದಿದೆ. ಆದ್ರೆ ರಾತ್ರಿ 9 ಗಂಟೆಯಾದರೂ ಮೃತ ದೇಹಗಳನ್ನು ಸಂಬಂಧಿಗಳಿಗೆ ನೀಡದಿರುವುದು ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೊಟ್ಟೆ ತುಂಬಿಸಿಕೊಳ್ಳಲು ಗುಳೆ ಹೋಗಿದ್ದ ಇವರು ಕೊರೊನಾ ಭೀತಿಯಿಂದ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಬೊಲೆರೋ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.