ರಾಯಚೂರು: ಗ್ರಾಮೀಣ ಪ್ರದೇಶವನ್ನು ಕೊರೊನಾ ಮುಕ್ತವನ್ನಾಗಿಸುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಎನ್ಐಸಿ ಸಭಾಂಗಣದಲ್ಲಿ ಪ್ರಧಾನಿ ವಿಡಿಯೋ ಸಂವಾದದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ದೇಶದ 10 ರಾಜ್ಯಗಳು, ಮುಖ್ಯಮಂತ್ರಿಗಳು, ಸಚಿವರು ಹಾಗೂ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು. ಅದರಲ್ಲಿ ರಾಜ್ಯದ 17 ಜಿಲ್ಲೆಗಳು ಸೇರಿವೆ. ಮುಖ್ಯಮಂತ್ರಿಗಳಿಂದ ಪ್ರಧಾನಿಯವರು ರಾಜ್ಯದ ಕುರಿತು ಮಾಹಿತಿ ಪಡೆದಿದ್ದಾರೆ ಎಂದರು.
ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿಯವರು ಹಳ್ಳಿಗಳನ್ನು ಕೋವಿಡ್ ಮುಕ್ತವಾಗಿಸುವ ಕುರಿತು ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ರಾಜ್ಯ ಸರ್ಕಾರಕ್ಕೆ ಕೇಂದ್ರದ ಸಂಪೂರ್ಣ ಸಹಕಾರ ಇರಲಿದೆ. ತಮ್ಮ ಅಗತ್ಯೆಗಳ ಕುರಿತು ಸಂವಾದದಲ್ಲಿ ಮಾಹಿತಿ ಪಡೆದಿದ್ದಾರೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ಸ್ಥಳೀಯ ಆಡಳಿತಕ್ಕೆ ಸಹಕಾರ
ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಗ್ರಾ.ಪಂ ಮಟ್ಟದ ಸಮಿತಿ ರಚಿಸಲಾಗುವುದು. ಕೋವಿಡ್ ತೊಲಗಿಸಲು ಸ್ಥಳೀಯ ಆಡಳಿತಕ್ಕೆ ಸಹಕಾರ ದೊರೆಯಲಿದೆ. ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ತಡೆಗಟ್ಟುವಲ್ಲಿ ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾಯಚೂರು ಜಿಲ್ಲೆಯ ಲಾಕ್ಡೌನ್ ಮುಂದುವರಿಕೆ
ಲಾಕ್ ಡೌನ್ ಕುರಿತು ಆಯಾ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಜಿಲ್ಲಾಡಳಿತಕ್ಕೆ ಲಾಕ್ ಡೌನ್ ಮಾಡುವ ಅಧಿಕಾರ ವಹಿಸಲಾಗಿದೆ. ಅದರ ಭಾಗವಾಗಿ ಇಂದು ರಾಯಚೂರು ಜಿಲ್ಲೆಯಲ್ಲಿ ಮೂರು ದಿನ ಲಾಕ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ದಿನ ಬಿಟ್ಟು ಮತ್ತೆ ಲಾಕ್ ಡೌನ್ ಮುಂದುವರೆಯಲಿದೆ. ರಾಜ್ಯದ ಲಾಕ್ ಡೌನ್ ಮಾಡುವ ಕುರಿತು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಟಾಸ್ಕ್ ಫೋರ್ಸ್ ಸಮಿತಿ ರಚಿಸಲು ಪಿಎಂ ಸೂಚನೆ
ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ರಚಿಸಲು ಪ್ರಧಾನ ಮಂತ್ರಿಗಳು ಸಂವಾದಲ್ಲಿ ಸೂಚಿಸಿದ್ದಾರೆ. ರೋಗ ನಿಯಂತ್ರಿಸಿ ಇತರೆ ಸ್ಥಳೀಯ ಆಡಳಿತಗಳಿಗೆ ಮಾದರಿಯಾಬೇಕು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಂದ ಮನೆ ಮನೆ ಸರ್ವೆ ನಡೆಸಿ ಸೋಂಕಿತರನ್ನು ಗುರುತಿಸಲಾಗುವುದು ಎಂದು ತಿಳಿಸಿದರು.
ಸಂಪೂರ್ಣ ಲಾಕ್ಡೌನ್
ಈಗಾಲೇ ಜಾರಿ ಇರುವ ಲಾಕ್ ಡೌನ್ನನ್ನು ನಾಳೆ ಒಂದು ದಿನ ಬೆಳಗ್ಗೆ 6 ರಿಂದ 12 ವರೆಗೆ ಸಡಿಲಗೊಳಿಸಲಾಗುವುದು. ಈ ಸಮಯದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಸಬಹುದಾಗಿದೆ. ನಂತರ ಸಂಪೂರ್ಣವಾಗಿ ಮೂರು ದಿನಗಳ ಕಾಲ ಲಾಕ್ ಡೌನ್ ಮಾಡಲಾಗುವುದು ಎಂದರು.
ರಾಯಚೂರಿನಲ್ಲಿ ನಾಲ್ಕು ಜನ ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ
ಜಿಲ್ಲೆಯಲ್ಲಿ 5 ಜನ ಬ್ಲಾಕ್ ಫಂಗಸ್ ರೋಗಿಗಳಿದ್ದಾರೆ. ಅದರಲ್ಲಿ ನಾಲ್ಕು ಜನರು ಹೆಚ್ಚುವರಿ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ತೆರಳಿದ್ದಾರೆ. ಉಳಿದ ಒಬ್ಬರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಗತ್ಯ ಔಷಧಿಗಳನ್ನು ತರಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.