ರಾಯಚೂರು: ಮನುಕುಲಕ್ಕೆ ಪ್ಲಾಸ್ಟಿಕ್ ಮಾರಕವಾಗಿದೆ. ಮಾರಕವಾಗಿರುವ ವಸ್ತುವನ್ನು ಬಳಕೆ ಮಾಡದಂತೆ ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದಕ್ಕೆ ನಗರಸಭೆ ಸದಸ್ಯೆಯೊಬ್ಬರು ಸಾಥ್ ನೀಡಿದ್ದಾರೆ.
ಸಿಂಧನೂರು ನಗರಸಭೆಯ 2ನೇ ವಾರ್ಡ್ ಸದಸ್ಯೆ ನಳನಿ ಚಂದ್ರಶೇಖರ ಮೇಟಿ ತಮ್ಮ ಸ್ವಂತ ಖರ್ಚಿನಲ್ಲಿ ಬಡಾವಣೆ ನಿವಾಸಿಗಳಿಗೆ ಬಟ್ಟೆಯಿಂದ ತಯಾರಿಸಿದ ಚೀಲಗಳನ್ನು ನೀಡುವ ಮೂಲಕ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಂದೇಶ ರವಾನಿಸಿ, ಪ್ರಧಾನಿ ಕರೆಗೆ ಸಾಥ್ ನೀಡಿದ್ದಾರೆ.
ಇನ್ನು ತಮ್ಮ ಬಡಾವಣೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಬಟ್ಟೆಯಿಂದ 600 ಕೈಚೀಲಗಳನ್ನು ಹೊಸಪೇಟೆಯಲ್ಲಿ ಸ್ವತಃ ತಮ್ಮ ಖರ್ಚಿನಲ್ಲಿ ಸಿದ್ಧಪಡಿಸಿ ಚೀಲದ ಮೇಲೆ ನಮ್ಮ ನಡೆ ಸ್ವಚ್ಛತೆಯ ಕಡೆ ಎಂದು ಶೀರ್ಷಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಚಿನ್ಹೆಯನ್ನು ಬಳಸಿಕೊಂಡು, ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ ಎಂದು ಮುದ್ರಿಸಿ ಬಡವಣೆ ನಿವಾಸಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಇನ್ನು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಪ್ಲಾಸ್ಟಿಕ್ ಮುಕ್ತ ಭಾರತ ಕನಸಿಗೆ ಅವರು ಸಾಥ್ ನೀಡುತ್ತಿದ್ದಾರೆ.