ರಾಯಚೂರು: ಗುಡಿಸಲು ಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುದಾನ ಇನ್ನೂ ಬಿಡುಗಡೆಯಾಗದೆ ಇರುವುದರಿಂದ ಫಲಾನುಭವಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ವಸತಿ ಯೋಜನೆಗಳಿಗೆ ಬಿಡುಗಡೆಯಾಗದ ಅನುದಾನ
ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿ ವರ್ಷಗಳೇ ಕಳೆದರೂ, ಪೂರ್ಣ ಪ್ರಮಾಣದ ಮನೆ ನಿರ್ಮಾಣವಾಗದೆ ಇರುವುದರಿಂದ, ಕೂಲಿ ಕಾರ್ಮಿಕರು ಇತ್ತ ಜೋಪಡಿಯೂ ಇಲ್ಲದೆ, ಅತ್ತ ಸುಸಜ್ಜಿತ ಮನೆಯೂ ಇಲ್ಲದೆ ಮನೆಯ ಬಾಡಿಗೆ ಕಟ್ಟಲೂ ಆಗದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅನುದಾನ ಬಿಡುಗಡೆಗಾಗಿ 2015- 16 ನೇ ಸಾಲಿನಲ್ಲಿ ಮನೆ ಮಂಜೂರಾತಿ ಪತ್ರ ಹಾಗೂ ಅನುದಾನ ಬಿಡುಗಡೆಯಾಗಿರುವ ದಾಖಲೆಗಳನ್ನು ಹಿಡಿದುಕೊಂಡು ನಗರಸಭೆಗೆ ಅಲೆದಾಡಿದರೂ ಅಧಿಕಾರಿಗಳಿಂದ ಬರುತ್ತಿರುವ ಹಾರಿಕೆಯ ಉತ್ತರದಿಂದ ಫಲಾನುಭವಿಗಳಿಗೆ ದಿಕ್ಕೇ ತೋಚದಂತಾಗಿದೆ. ಇದ್ದ ಮನೆ ಕೆಡವಿ ಇತ್ತ ಗುಡಿಸಲೂ ಇಲ್ಲದೆ ಅತ್ತ ಮನೆಯೂ ಪೂರ್ಣವಾಗದೆ ಬೀದಿಯಲ್ಲಿ ಬದುಕುವ ಸ್ಥಿತಿ ಎದುರಾಗಿದೆ.
ಓದಿ: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗ್ರಾಮಸ್ಥರ ಆಕ್ರೋಶ!
ಈ ಕುರಿತು ಫಲಾನುಭವಿಗಳಾದ ಮೆಹಬೂಬಿ ಹಾಗು ಯೇಸು ಮಾತನಾಡಿ, 2015- 16 ನೇ ಸಾಲಿನಲ್ಲಿ ನಗರಸಭೆಯಿಂದ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾಗಿದ್ದು, ನಿಮ್ಮ ಗುಡಿಸಲು ತೆಗೆದು ಸುಸಜ್ಜಿತ ಮನೆ ನಿರ್ಮಾಣಕ್ಕೆ ಸರ್ಕಾರ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ನಮ್ಮ ದಾಖಲಾತಿ ಸಂಗ್ರಹಿಸಿ ಮನೆ ಮಂಜೂರಾತಿ ಪತ್ರ ಸಹ ನೀಡಿದ್ದರು. ನಮ್ಮ ಹೆಸರಿಗೆ ದಾಖಲೆಗಳಲ್ಲಿ ಅನುದಾನ ಬಿಡುಗಡೆಯಾಗಿದೆ. ಆದರೆ ಖಾತೆಗೆ ಒಂದು ರೂಪಾಯಿ ಹಣವೂ ಜಮೆಯಾಗಿಲ್ಲ. ಇದ್ದ ಗುಡಿಸಲು ತೆಗೆದು ಸುಸಜ್ಜಿತ ಮನೆಯ ಕನಸಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ಶೀಘ್ರವಾಗಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.