ರಾಯಚೂರು : ನಮ್ಮ ದೇಶದ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆ, ಸುರಕ್ಷತೆ ಇಲ್ಲದೇ ಪ್ರಯಾಣಿಕರ ತೆಗಳಿಕೆಗೆ ಗುರಿಯಾಗಿವೆ. ಆದ್ರೆ ರಾಯಚೂರು ರೈಲ್ವೆ ನಿಲ್ದಾಣ ಇದಕ್ಕೆ ಅಪವಾದವಾಗಿ ನಿಂತಿದ್ದು, ನಿಲ್ದಾಣದ ಯಾವ ಕಡೆ ನೋಡಿದರೂ ಮಹಾತ್ಮಾ ಗಾಂಧಿ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರ ಪೇಂಟಿಂಗ್ ಇದ್ದು, ನೋಡುಗರ ಮೆಚ್ಚುಗೆ ಪಡೆದಿದೆ.
ರಾಯಚೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಮುನ್ನ ನಿಮಗೆ ಸ್ವಾಗತ ಬೋರ್ಡ್ ಅಲ್ಲ ಬದಲಾಗಿ ಸ್ಟೇಷನ್ ಗೋಡೆಗಳ ಮೇಲೆ ಬಿಡಿಸಿದ ಹೂವಿನ ಸುಂದರ ಚಿತ್ರ ಗಳು ಸ್ವಾಗತಿಸುತ್ತಿವೆ. ಇಲ್ಲಿಂದ ಸ್ಟೇಷನ್ ಟಿಕೆಟ್ ಕೌಂಟರ್ನಿಂದ ಅರಂಭವಾಗುವ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ಹಂಪಿಯ ಕಲ್ಲಿನ ರಥ, ವಿರೂಪಾಕ್ಷೇಶ್ವರ ದೇವಾಲಯ, ಬಿಜಾಪುರ(ವಿಜಯಪುರ)ದ ಗೋಳಗುಮ್ಮಟ ಹಾಗೂ ವಿವಿಧ ಭಂಗಿಯ ನೃತ್ಯಗಾರರ ಚಿತ್ರಗಳು ನಿಬ್ಬೆರಗಾಗಿಸುತ್ತದೆ. ರಾಯಚೂರು ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು ಒಮ್ಮೆ ಭೇಟಿ ನೀಡಿದ್ದರಂತೆ. ಅವರ ನೆನಪಿಗಾಗಿ ಹಾಗೂ ಕಳೆದ ಬಾರಿ ನಡೆದ ಗಾಂಧಿ ಜಯಂತಿ ನಿಮಿತ್ತ ಬಾಪು ಅವರನ್ನು ನೆನೆಯಲು ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಈ ಪೇಂಟಿಂಗ್ ಮೊರೆ ಹೋಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿಯೊಬ್ಬರು.
ಹೀಗೆ ಇತರ ರೈಲ್ವೆ ನಿಲ್ದಾಣಗಳಿಗೆ ಮಾದಿರಿಯಾಗಿರುವ ರಾಯಚೂರು ನಿಲ್ದಾಣ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಂದ ಪ್ರಶಂಸೆಗೂ ಪಾತ್ರವಾಗಿದೆ.