ರಾಯಚೂರು: ಮಗುವನ್ನು ಕಳೆದುಕೊಂಡ ದುಃಖದಲ್ಲಿಯೂ ದಂಪತಿ ಮಗುವಿನ ನೇತ್ರದಾನ ಮಾಡುವ ಮೂಲಕ ಮಗುವಿನ ಸಾವಿನಲ್ಲೂ ಸಾರ್ಥಕತೆ ಮೆರದಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೆಜ್ಜಲಗಟ್ಟಾದ ನಿವಾಸಿ ಅಮರೇಗೌಡ ಕಾಮರೆಡ್ಡಿ ತಮ್ಮ 14 ತಿಂಗಳ ಮಗನಾದ ಬಸವಪ್ರಭುವಿನ ಕಣ್ಣುಗಳನ್ನು ದಾನ ಮಾಡಿದ್ದಾರೆ. ಪುಟ್ಟ ಕೂಸು ಬಸವಪ್ರಭುವಿನ ಎರಡು ಕಣ್ಣುಗಳನ್ನು ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿಗೆ ಕಳೆದ ಮೂರು ದಿನಗಳ ಹಿಂದೆ ದಾನ ಮಾಡಿದ್ದಾರೆ. ಅಮರೇಗೌಡ ಕಾಮರೆಡ್ಡಿ ಹಟ್ಟಿ ಚಿನ್ನದ ಕಂಪನಿಯ ನೌಕರರು. ಇವರ 3ನೇ ಮಗ ಬಸವಪ್ರಭು ಇತ್ತೀಚಿಗೆ ಮೃತಪಟ್ಟಿದ್ದನು.
ಇಬ್ಬರು ಗಂಡು ಮಕ್ಕಳ ಕಳೆದುಕೊಂಡ ದಂಪತಿ: 3 ವರ್ಷದ ಎರಡನೇ ಹೆಣ್ಣು ಮಗು ಅನ್ವಿತಾ ಆರೋಗ್ಯವಾಗಿದ್ದಾಳೆ. ಆದರೆ ಮೂರನೇಯ ಮಗು ಬಸವಪ್ರಭು ತೀವ್ರ ಉಸಿರಾಟ ತೊಂದರೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಹೀಗಾಗಿ ರಾಯಚೂರು, ಬೆಳಗಾವಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಓಡಾಡಿ ಮಗುವಿನ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಸಾರ್ಥಕತೆ ಮೆರೆದ ದಂಪತಿ: ಮೊದಲ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ದಂಪತಿ ಎರಡನೆ ಮಗುವನ್ನಾದರೂ ಉಳಿಸಿಕೊಳ್ಳಬೇಕು ಎಂಬ ಆಸೆಯಿಂದ ಹಲವೆಡೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತಮ್ಮ ಮಗ ಇನ್ನು ಯಾವ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಚಿಕಿತ್ಸೆ ಕೊಡಿಸಿದರೂ ಬದುಕು ಉಳಿಯುವುದಿಲ್ಲ ಎನ್ನುವುದು ಗೊತ್ತಾದಾಗ ದಂಪತಿ ಮಗನ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯ ನೇತ್ರ ತಜ್ಞರ ಸಹಾಯದೊಂದಿಗೆ ನವೋದಯ ವಿದ್ಯಾಲಯವನ್ನು ಸಂಪರ್ಕಿಸಿದ್ದಾರೆ. ಎರಡು ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದರೂ, ಸಾವಿನ ನಂತರವೂ ಮಗುವಿನ ಕಣ್ಣುಗಳು ದೃಷ್ಟಿಹೀನರಿಗೆ ಬೆಳಕಾಗಲಿ ಎನ್ನುವ ಉದ್ದೇಶದಿಂದ ನವೋದಯ ನೇತ್ರಾಲಯಕ್ಕೆ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಸ್ವಇಚ್ಛೆಯಿಂದ ದಾನ: ಅನುವಂಶಿಕ ಗುಣಲಕ್ಷಣಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಮೊದಲನೇ ಮಗು ಮರಣ ಹೊಂದಿದ್ದಾಗ ಅಂಗಾಂಗ ದಾನ, ನೇತ್ರದಾನ ಮಾಡಲು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. 2ನೇ ಮಗು ಬಸವಪ್ರಭು ಸಾವನ್ನಪ್ಪಿದಾಗ ಅಂಗಾಂಗ ಸಹಿತ ನೇತ್ರದಾನ ಮಾಡಲು ನಿರ್ಧರಿಸಲಾಯಿತು. ಆದರೆ ನಮಗೆ ಪೂರಕ ಮಾಹಿತಿ ದೊರೆಯಲಿಲ್ಲ. ಬೇರೆ ಯಾರೂ ಹೇಳಿ ನಾವು ಮಗನ ನೇತ್ರದಾನವನ್ನು ಮಾಡಿಲ್ಲ. ನಮ್ಮ ಸ್ವಇಚ್ಛೆಯಿಂದ ಮಾಡಿದ್ದೇವೆ ಎಂದು ಮಗುವಿನ ತಂದೆ ತಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಶಾಲೆಯಲ್ಲಿ ಆಟವಾಡುತ್ತಲೇ ಕಣ್ಮುಚ್ಚಿದ ಬಾಲಕ.. ನೇತ್ರದಾನ ಮಾಡಿದ ಪೋಷಕರು