ರಾಯಚೂರು: ಇಎಫ್ಎಮ್ಎಸ್ ವೇತನಕ್ಕಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಯ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಲು ಪಿಡಿಒಗಳಿಗೆ ಸೂಕ್ತ ಆದೇಶ ನೀಡಬೇಕು. ಇತರೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಚಾಯತಿ ನೌಕರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಮಿತಿಯ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ನೌಕರರು ಪ್ರತಿಭಟನೆ ನಡೆಸಿದರು. ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿ ನೌಕರರು ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಲು ಮುಂದಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಎಲ್ಲಾ ಪಂಚಾಯಿತಿ ಸಿಬ್ಬಂದಿಗಳ ಮಾಹಿತಿಯನ್ನು ಪಂಚಾಯಿತಿ ಪಂಚತಂತ್ರದಲ್ಲಿ ಅಳವಡಿಸಬೇಕಾಗಿದೆ. ಆದರೆ ಇಲ್ಲಿಯವರೆಗೆ ಹಲವಾರು ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿಲ್ಲ ಎಂದು ದೂರಿದರು.
ಈ ಕುರಿತು ಪಂಚಾಯಿತಿ ಪಿಡಿಒಗಳು ಇಲ್ಲಸಲ್ಲದ ನೆಪ ಹೇಳಿ ಮೀನಾಮೇಷ ಎಣಿಸುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಡಿಪಿಆರ್ ಇಲಾಖೆ ದಿನಾಂಕ 27/10/2017 ಸುತ್ತೋಲೆಯಲ್ಲಿ ಸಿಬ್ಬಂದಿ ಪಿಎಫ್, ಎಂಎಸ್ ವೇತನ ಪಾವತಿಗೆ ಪಂಚತಂತ್ರದಲ್ಲಿ ಮಾಹಿತಿಗಳು ಅಳವಡಿಸುವುದಕ್ಕೆ ಯಾವುದೇ ಸಂಬಂಧವಿರುವುದಿಲ್ಲ. ಸಿಬ್ಬಂದಿಯ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರಿಸಲು ಆದೇಶ ನೀಡುತ್ತಾರೆ. ಅಲ್ಲದೆ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲ ಗ್ರಾಪಂ ಸಿಬ್ಬಂದಿ ಅನುಮೋದನೆಗಾಗಿ ದಾಖಲೆ ಪರಿಶೀಲನೆ ನಡೆದಿದ್ದು, ಈವರೆಗೆ ಅರ್ಧದಷ್ಟು ಪಂಚಾಯಿತಿ ಸಿಬ್ಬಂದಿ ಸಿಬ್ಬಂದಿಗಳ ಪರಿಶೀಲನೆ ಮಾಡಬೇಕಾಗಿದೆ.
2012ರಿಂದ ಇಲ್ಲಿಯವರೆಗೆ ಯಾವುದೇ ಕರ ವಸೂಲಿಗಾರರಿಗೆ ಬಡ್ತಿ ನೀಡಿರುವುದಿಲ್ಲ. 8 ಮತ್ತು 10 ವರ್ಷ ಪೂರೈಸಿದ ಕರ ವಸೂಲಿಗಾರರು ಗ್ರೇಡ್-2 ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕಾಗಿದೆ. ಇಲ್ಲಿಯವರೆಗೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.