ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮ ಪಂಚಾಯಿತಿ 1933ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ 27 ವರ್ಷ ಕಳೆದಿವೆ. ಈವರೆಗೆ ಮತದಾನ ನಡೆಸದೆ ಪಂಚಾಯಿತಿಯ 25 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಪಂ ಚುನಾವಣೆ ವೇಳೆ ಯಾವುದೇ ಪಕ್ಷಗಳಿಗೆ ಅವಕಾಶ ನೀಡುವುದಿಲ್ಲ. ಬದಲಾಗಿ ಗ್ರಾಮಗಳ ಅಭಿವೃದ್ಧಿ ಹಿತದೃಷ್ಟಿಯನ್ನು ಪ್ರಮುಖವಾಗಿರಿಸಿಕೊಂಡು ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
1993ರಲ್ಲಿ ತಿಡಿಗೋಳ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದಿದೆ. ಆಗಿನಿಂದಲೂ ಗ್ರಾಪಂ ಚುನಾವಣೆ ಎದುರಾದಾಗ ಗ್ರಾಮದ ಹಿರಿಯರು ಸೇರಿ ಸೂಕ್ತ ಅಭ್ಯರ್ಥಿಗಳನ್ನು ನೋಡಿಕೊಂಡು ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ. ತಿಡಿಗೋಳ ಗ್ರಾಪಂ ವ್ಯಾಪ್ತಿಗೆ ತಿಡಿಗೋಳ, ನಿಡಿಗೋಳ, ಕುರಕುಂದ, ಉಪ್ಪಲದೊಡ್ಡಿ, ಕಾನಿಹಾಳ ಗ್ರಾಮಗಳು ಸೇರುತ್ತವೆ. ಈ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಏಕತೆ, ಒಗ್ಗಟಿನಿಂದ ಅವಿರೋಧ ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಗಳ ಆಯ್ಕೆ ವೇಳೆ ಯಾವುದೇ ಆಮಿಷಗಳಿಗೆ ಅವಕಾಶ ಕಲ್ಪಿಸದೆ ಗ್ರಾಮಗಳ ಒಳಿತಿಗಾಗಿ ಆದ್ಯತೆ ನೀಡಲಾಗುತ್ತಿದೆ.
27 ವರ್ಷದ ಸಂಪ್ರದಾಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ
ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಸಹ ಅವಿರೋಧ ಆಯ್ಕೆ ಮಾಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಆದ್ರೆ ಹಲವು ಜನರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ವಾಪಾಸ್ ತೆಗೆದುಕೊಂಡರೆ ಹಳೆಯ ಸಂಪ್ರದಾಯವೆನ್ನುವಂತೆ ಅವಿರೋಧ ಆಯ್ಕೆಯಾಗುತ್ತದೆ. ಇಲ್ಲದಿದ್ದರೆ 27 ವರ್ಷದ ಸಂಪ್ರದಾಯಕ್ಕೆ ಬ್ರೇಕ್ ಬೀಳುವ ಸಾಧ್ಯತೆಯಿದೆ.
ಓದಿ: ರಾಜ್ಯದಲ್ಲಿಂದು 1,222 ಕೊರೊನಾ ಕೇಸ್ ಪತ್ತೆ: 8 ಮಂದಿ ಬಲಿ
ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಭಾರಿ ಪೈಪೂಟಿ ನಡೆಯಲಿದೆ. ತಿಡಿಗೋಳ ಗ್ರಾಮ ಪಂಚಾಯಿತಿ ಹಲವು ವರ್ಷಗಳಿಂದ ಅವಿರೋಧವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುವುದು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ. ಆದ್ರೆ ಈ ಬಾರಿ ಹಲವು ಜನರಿಂದ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದ ಗ್ರಾಮದ ಒಮ್ಮತದ ತೀರ್ಮಾನದಂತೆ ಅವಿರೋಧ ಆಯ್ಕೆ ಮುಂದುವರೆಸುತ್ತಾರೆಯೋ ಅಥವಾ ಹಳೇ ಪದ್ಧತಿಗೆ ಇತಿಶ್ರೀ ಹಾಡಲಾಗುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.