ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಯಚೂರಿನ ಅಂಬೇಡ್ಕರ್ ವೃತ್ತ ,ಸ್ಟೇಶನ್ ರಸ್ತೆ, ಮಾನ್ವಿ ತಾಲೂಕು ಸೇರಿದಂತೆ ವಿವಿದೆಡೆ ಕ್ಯಾಂಡಲ್ ಹಚ್ಚಿ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ಕ್ಯಾಂಡಲ್ ಹಾಗೂ ವಿದ್ಯಾರ್ಥಿನಿ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ಯುವಕರು ಆಕೆಗೆ ನ್ಯಾಯ ಸಿಗಲೇ ಬೇಕು ಎಂದು ಆಗ್ರಹಿಸಿದ್ರು. ಈ ಘಟನೆ ಯಾವುದೇ ಕಾರಣಕ್ಕೂ ಸಹಿಸಲಾಗದು ಇಂದು ಈ ಯುವತಿ, ನಾಳೆ ಮತ್ಯಾರೋ ಇಂಥಾ ಕೃತ್ಯಗಳಿಗೆ ಗುರಿಯಾಗಬಹುದು, ಆದ್ದರಿಂದ ಆರೋಪಿಗಳಿಗೆ ಶಿಘ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಇತ್ತ ಮಾನ್ವಿಯ ಬಸವೇಶ್ವರ ವೃತ್ತದಲ್ಲಿ ಜಾತ್ಯಾತೀತವಾಗಿ ಹಿಂದು, ಮುಸ್ಲಿಂ, ಕ್ರೈಸ್ತ ಯುವಕರು ಸೇರಿ ಕೃತ್ಯವನ್ನ ಖಂಡಿಸಿದ್ದಾರೆ.
ಕೊಪ್ಪಳದಲ್ಲೂ ವಿದ್ಯಾರ್ಥಿನಿ ಸಾವಿಗೆ ಖಂಡನೆ ವ್ಯಕ್ತವಾಗಿದೆ. ಈಗಾಗಲೆ ಅನುಮಾನಾಸ್ಪದ ಆರೋಪಿಯ ಬಂದನವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಘಟನೆ ಕುರಿತು ಸಾಮಾಜಿಕ ಮಾದ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಧು ಸಾವಿನ ಪ್ರಕರಣ ಹಲವಾರು ಹಂತಕ್ಕೆ ತಲುಪಿದ್ದು ಶೀಘ್ರವೇ ಆರೋಪಿಗಳಿಗೆ ಶಿಕ್ಷೆ ಒದಗಿಸುವ ಭರವಸೆ ನೀಡಬೇಕು ಇಲ್ಲದೇ ಹೋದಲ್ಲಿ ಮತ ಬಹಿಷ್ಕಾರಕ್ಕೂ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯೂ ವ್ಯಕ್ತವಾಗುತ್ತಿದೆ.