ರಾಯಚೂರು: ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಡಾ.ಶರಣಪ್ರಕಾಶ ಪಾಟೀಲ್ ನೇಮಕ ಮಾಡಿರುವುದಕ್ಕೆ ಪ್ರಗತಿಪರ ರೈತ ಸಂಘಟನೆಗಳು ತೀವ್ರವಾಗಿ ಖಂಡಿಸಿ, ಗೋ ಬ್ಯಾಕ್ ಹಾಗೂ ಬಾಯ್ಕಾಟ್ ಎಂದು ಸಚಿವರ ಪೋಸ್ಟ್ ಅಂಟಿಸಿ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿ, ಬಾಯ್ಕಾಟ್ ಹಾಗೂ ಗೋ ಬ್ಯಾಕ್ ಸಚಿವರೇ ಎಂದು ಘೋಷಣೆಗಳನ್ನು ಕೂಗಿದ ಪ್ರಗತಿಪರ ಸಂಘಟನೆಗಳ ಮುಂಖಡರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವ ಶರಣ ಪ್ರಕಾಶ್ ಪಾಟೀಲ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆಯಲು ಮುಂದಾಗರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬೆಂಕಿ ಹಚ್ಚದಂತೆ ತಡೆಯಲಾಯಿತು.
ಇದನ್ನೂ ಓದಿ: District incharge ministers: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಕೃಷ್ಣ ಭೈರೇಗೌಡ, ರಹೀಂಖಾನ್ ಅವರಿಗಿಲ್ಲ ಉಸ್ತುವಾರಿ ಹೊಣೆ
ರಾಯಚೂರು ಜಿಲ್ಲೆಗೆ ಮಾಡಿದ ಅನ್ಯಾಯ- ಆರೋಪ: ರಾಯಚೂರು ಜಿಲ್ಲೆಗೆ ಹಲವು ವರ್ಷಗಳ ನಂತರ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಸಚಿವ ಸ್ಥಾನವನ್ನು ಕಲ್ಪಿಸಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದಾಗಿ ಇಲ್ಲಿನ ಸ್ಥಳೀಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನೀಡಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಪೂರಕವಾಗುವುದಿಲ್ಲ, ಜಿಲ್ಲೆಗೆ ಅನ್ಯಾಯ ಮಾಡಿದಂತೆ ಆಗಿದೆ ಎಂದು ಆರೋಪಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಅಡ್ಡಿ ಸಾಧ್ಯತೆ: ಏಮ್ಸ್ ರಾಯಚೂರು ಜಿಲ್ಲೆಯಲ್ಲಿಯೇ ಸ್ಥಾಪನೆ ಮಾಡಬೇಕಾಗಿದೆ. ನೂರಾರು ದಿನಗಳಿಂದ ನಿರಂತರವಾದ ಹೋರಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಡಾ.ಶರಣಪ್ರಕಾಶ್ ಪಾಟೀಲ್ ಕಲಬುರಗಿ ಜಿಲ್ಲೆಯ ಏಮ್ಸ್ ಸ್ಥಾಪಿಸುವುದಾಗಿ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಅನ್ಯಾಯವೆಸಗಲು ಮುಂದಾಗಿದ್ದಾರೆ. ಈ ಮೂಲಕ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆದು ಏಮ್ಸ್ ಜಿಲ್ಲೆಗೆ ತಪ್ಪಿಸಬಹುದು ಎಂದು ಪ್ರತಿಭಟನೆ ಆತಂಕ ವ್ಯಕ್ತಪಡಿಸಿದರು.
ಕೂಡಲೇ ಸ್ಥಳೀಯ ಸಚಿವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ನೀಡಲು ಒತ್ತಾಯ: ಹೀಗಾಗಿ ಕೂಡಲೇ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ಸ್ಥಳೀಯ ಸಚಿವರಾಗಿ ಆಗಿರುವ ಎನ್.ಎಸ್.ಬೋಸರಾಜು ನೀಡಬೇಕು ಎಂದು ಒತ್ತಾಯಿಸಿದ ಅವರು, ಡಾ.ಶರಣಪ್ರಕಾಶ್ ಪಾಟೀಲ್ ಗೋ ಬ್ಯಾಕ್ ಹಾಗೂ ಬಾಯ್ಕಾಟ್ ಎಂದು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಸಚಿವರಿಗೆ ಕೊಡಗು ಜಿಲ್ಲೆಯ ಉಸ್ತುವಾರಿ: ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಸಚಿವ ಎನ್. ಎಸ್. ಬೋಸರಾಜು ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ. ಇದರಿಂದ ರಾಯಚೂರು ಜಿಲ್ಲೆಯ ವಿವಿಧ ಸಂಘಟನೆಗಳ ರೈತರು ಆಕ್ರೋಶಗೊಂಡಿದ್ದಾರೆ. ಸಚಿವ ಬೋಸರಾಜುಗೆ ಸ್ವಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.