ರಾಯಚೂರು: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಮೇ 23 ರಂದು ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಭಾನುವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಕಿರಾಣಿ ಅಂಗಡಿ, ಮಾಂಸ ಖರೀದಿಸಲು ಜಿಲ್ಲೆಯ ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಈ ವೇಳೆ ಸಾರ್ವಜನಿಕರು ವಾಹನಗಳ ಮುಖಾಂತರ ಗುಂಪು ಗುಂಪಾಗಿ ಬಂದು ಖರೀದಿಸುತ್ತಿರುವುದರಿಂದ ಸಾಮಾಜಿಕ ಅಂತರ ಪಾಲನೆಯಾಗದಿರುವುದು ಕಂಡು ಬಂದಿರುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯಿಂದ ಗುರುತಿಸಿದ ಸ್ಥಳಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಪೊಲೀಸ್ ಇಲಾಖೆ ಗುರುತಿಸಿದ ಪಾರ್ಕಿಂಗ್ನಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು.
ಮನೆ ಮನೆಗಳಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಹೋಂ ಡೆಲಿವರಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅವಶ್ಯಕತೆ ಇರುವವರು ಹೋಂ ಡೆಲಿವರಿ ಮುಖಾಂತರ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬಹುದಾಗಿದೆ. ಜಿಲ್ಲೆಯ ಎಲ್ಲಾ ನಗರಗಳಲ್ಲಿ ವಾಹನಗಳು ಬಳಸುವುದನ್ನು ಕಡಿಮೆ ಮಾಡುವುದು ಹಾಗೂ ಅವರವರ ಬಡಾವಣೆಗಳಲ್ಲಿ ಹಣ್ಣು, ತರಕಾರಿ ಇತರ ಅಗತ್ಯ ವಸ್ತುಗಳನ್ನು ಖರೀದಿಸುವುದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿರುತ್ತದೆ.
ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಾರಿ, ಟ್ರಕ್, ಭಾರಿ ಪ್ರಮಾಣದ ವಾಹನಗಳಿಗೆ ನಗರದ ಒಳಗಡೆ ಪ್ರವೇಶದಂತೆ ನಿರ್ಬಂಧ ಹೇರಲಾಗಿದೆ. ಗ್ರಾಮೀಣ ಪ್ರದೇಶದ ಜನರು ಹತ್ತಿರವಿರುವ ಹಣ್ಣು, ತರಕಾರಿ, ಕಿರಾಣಿ ಅಂಗಡಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿರುತ್ತದೆ. ಆದರೆ ನಗರಕ್ಕೆ ಬಂದು ಖರೀದಿಸಲು ಅವಕಾಶ ವಿರುವುದಿಲ್ಲ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.