ರಾಯಚೂರು: ಪಾರ್ಟಿಯಲ್ಲಿ ಯಾರೂ ಕೂಡಾ ಲಕ್ಷ್ಮಣ ರೇಖೆ ದಾಟಬಾರದು. ಆ ರೇಖೆಯನ್ನು ದಾಟಿದರೆ ತೊಂದರೆಯಾಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಎಚ್ಚರಿಕೆ ನೀಡಿದರು. ರಾಯಚೂರಿನಲ್ಲಿಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮನೆಗೆ ಸಚಿವರಾದ ಡಾ.ಜಿ.ಪರಮೇಶ್ವರ ಹಾಗೂ ಸತೀಶ್ ಜಾರಕಿಹೋಳಿ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರವರು. ಪಕ್ಷದಲ್ಲಿ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಹೋಗಿ ಮಾತನಾಡಬೇಕಾಗುತ್ತದೆ. ಸಮಾಧಾನ ಮಾಡುವ ಕೆಲಸ ಮಾಡುತ್ತಾರೆ. ಹೈದರಾಬಾದ್ನಲ್ಲಿ ಪಕ್ಷದ ಸಭೆಯಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಅವರಿಗೂ ಆಹ್ವಾನವಿದೆ. ಇದೆಲ್ಲ ಸಣ್ಣ ವಿಷಯ. 135 ವರ್ಷಗಳ ಇತಿಹಾಸವಿರುವ ರಾಷ್ಟ್ರಮಟ್ಟದ ಪಕ್ಷದಲ್ಲಿ ಕೆಲವೊಮ್ಮೆ ಯಾರಿಗಾದರೂ ನೋವು ಆಗಿದ್ದರೆ, ಅದನ್ನು ಸರಿ ಮಾಡುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂದು ಹೇಳಿದರು.
ಸಚಿವ ಡಿ.ಸುಧಾಕರ್ ಭೂ ಹಗರಣ ಆರೋಪದ ವಿಚಾರಕ್ಕೆ, ಎಫ್‌ಐಆರ್ ಆಗಿದೆ. ತನಿಖೆಯೂ ನಡೆಯುತ್ತಿದೆ. ತನಿಖೆಯಲ್ಲಿ ಏನು ಬರುತ್ತದೋ ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ನಡೆದಿರುವ ಘಟನೆ. ಈಗ ಸಚಿವರಾಗಿರುವ ಕಾರಣಕ್ಕೆ ತೇಜೋವಧೆ ಮಾಡಲು ಆರೋಪ ಹೊರಿಸುತ್ತಿದ್ದಾರೆ. ಈಗ ಸರ್ಕಾರದಿಂದ ಉತ್ತಮ ಆಡಳಿತ ನಡೆಯುತ್ತಿದೆ. ಜನರ ಒಲವೂ ಸಹ ಕಾಂಗ್ರೆಸ್ ಪಕ್ಷದ ಮೇಲಿದೆ. ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ. ಈಗ ಆರೋಪಗಳಿಗಾಗಿ ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತಂತೆ ರಾಜ್ಯದ ಮಟ್ಟದ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಹಿರಿಯ ನಾಯಕರಾಗಿರುವ ಜೊತೆಗೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಮೈತ್ರಿ ಕುರಿತಾಗಿ ದೆಹಲಿಗೆ ಹೋದ ಸಂದರ್ಭದಲ್ಲಿ ಹೇಳಿಕೆಯ ಬಗ್ಗೆ ಯೂಟರ್ನ್ ಹೊಡೆದಿದ್ದಾರೆ. ಅವರ ಪಕ್ಷದಲ್ಲಿ ಗೊಂದಲ ಇರುವುದು ಗೊತ್ತಾಗುತ್ತಿದ್ದು, ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ನಮ್ಮ ಪಕ್ಷದಲ್ಲಿ ಚುನಾವಣೆಗೆ ತಯಾರಿ ನಡೆಯುತ್ತಿದೆ. ಹೈದರಾಬಾದ್ನಲ್ಲಿ ಪಾರ್ಟಿಯ ಸಿಡಬ್ಲ್ಯೂಎಸ್ ಮಿಟಿಂಗ್ ನಡೆಯುತ್ತಿದೆ. ಪಾರ್ಟಿ ಹೈಕಮಾಂಡ್ ಎಲ್ಲ ತಯಾರಿ ನಡೆಸುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಜಿಲ್ಲಾಡಳಿತದ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್. ಬೋಸರಾಜು ಭಾಗವಹಿಸಿ, ದಿನಾಚರಣೆ ಉದ್ಘಾಟಿಸಿ, ಸಂವಿಧಾನ ಪೀಠಿಕೆ ಓದಿದರು.
ಇದನ್ನೂ ಓದಿ : ಸಚಿವ ಡಿ.ಸುಧಾಕರ್‌ಗೆ ರಿಲೀಫ್: ದೌರ್ಜನ್ಯ ಪ್ರಕರಣಕ್ಕೆ ಹೈಕೋರ್ಟ್ ತಡೆ