ರಾಯಚೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪ ಇರುವುದರಿಂದ ಸಿಎಂ ಬದಲಾವಣೆ ಯಾಗದು. ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿಎಂ ಆಗಬೇಕೆಂಬ ಕನಸು ನನಸಾಗುವುದಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. 2022 ಆಗಸ್ಟ್ 21 ರಿಂದ ರಾಜ್ಯದ ಎಲ್ಲೆ ಕಡೆ ಪ್ರವಾಸ ಹಮ್ಮಿಕೊಳ್ಳಲಾಗುವುದು. ಬರುವಂತಹ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಬರುವುದು ಶತಸಿದ್ದ. ಬರುವ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಹುಡುಕಿ ಕೆಲಸ ಮಾಡಲು ಹೈಕಮಾಂಡ್ ಸೂಚನೆ ನೀಡಿದ್ದು, ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ರಾಜ್ಯದ ಜನತೆಗೆ ಬಿಜೆಪಿ ಪರ ಒಲವುವಿದ್ದು, ಕರ್ನಾಟಕದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದು ಯಡಿಯೂರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.
ಇತ್ತೀಚಿಗೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಜತೆ ಚರ್ಚೆ ವೇಳೆ ರಾಜ್ಯ ರಾಜಕೀಯ ವಿದ್ಯಮಾನದ ಕುರಿತು ವಿಷಯ ಮಂಡನೆ ಮಾಡಲಾಗಿದೆ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಕೇಂದ್ರ ನಾಯಕರಿಂದ ಯಾವುದೇ ಅಡ್ಡಿ, ಆತಂಕವಿಲ್ಲ. ಸಾಮೂಹಿಕ ನೇತೃತ್ವದಲ್ಲೇ ಚುನಾವಣೆ ಎದುರಿಸ್ತೇವೆ. ನಾನು ರಾಜೀನಾಮೆ ಕೊಟ್ಟ ನಂತರವೇ ಸಿಎಂ ಆಯ್ಕೆ ಆಗಿದೆ. ನನಗೆ ಪಕ್ಷ ಎಲ್ಲ ರೀತಿಯ ಗೌರವ ನೀಡಿದೆ. ಪಕ್ಷದಿಂದ ನನಗೆ ಅನ್ಯಾಯ ಆಗಿಲ್ಲ. ಆ ಋಣ ತೀರಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಬಿಹಾರದ ಸಿಎಂ ನಿತೀಶ್ ಕುಮಾರ್ ಅನೇಕ ಸಲ ಮೈತ್ರಿ ಮಾಡಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಈ ರೀತಿಯ ವಿದ್ಯಮಾನಗಳಿಂದ ಪಕ್ಷಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗದು. ಮುಂದೆಯೂ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ವಿಧಾನಸಭಾ ಎಲೆಕ್ಷನ್ನಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಶಿಕಾರಿಪುರದಿಂದ ಪುತ್ರ ವಿಜಯೇಂದ್ರನಿಗೆ ಅವಕಾಶ ನೀಡುವಂತೆ ಕೇಳಿದ್ದೇನೆ. ಕೇಂದ್ರ ಒಪ್ಪಿದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂದರು.
ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು: ಕಾಂಗ್ರೆಸ್ ಪಕ್ಷವು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾಡಿರುವ ಆರೋಪ ಶುದ್ಧ ಸುಳ್ಳು. ಕೆಲವೊಂದು ಸಮಸ್ಯೆಗಳಿದ್ದು ಪರಿಹರಿಸಿಕೊಂಡು ಮುಂದುವರಿಯಲಿದ್ದೇವೆ. ಕೇಂದ್ರ ನಾಯಕರ ತೀರ್ಮಾನದಿಂದಲೇ ಆಯಾ ಜಿಲ್ಲೆಯ ಸಚಿವರನ್ನು ಆಯಾ ಜಿಲ್ಲೆಗಳಿಗೆ ಸಚಿವರಾಗಿ ನೇಮಿಸಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲು ಬಿಜೆಪಿ ಅವಕಾಶ ನೀಡಲ್ಲ.
ಇಡಿ, ಸಿಐಡಿ ಸೇರಿ ಯಾವುದೇ ತನಿಖಾ ಸಂಸ್ಥೆಯ ಬಗ್ಗೆ ಕಾಂಗ್ರೆಸ್ನವರು ಭಯ ಬೀಳಬೇಕಿಲ್ಲ. ತಪ್ಪು ಮಾಡಿರದಿದ್ದರೆ ಕಾಂಗ್ರೆಸ್ನವರು ಆತಂಕಪಡಬೇಕಿಲ್ಲ. ಸಂಪುಟ ವಿಸ್ತರಣೆಯ ಮೂಲಕ ಸಿಎಂ ಎಲ್ಲ ಪ್ರದೇಶಕ್ಕೆ ಪ್ರಾಶಸ್ತ್ಯ ನೀಡಲಿದ್ದಾರೆ. ಮನೆ ಮನೆ ರಾಷ್ಟ್ರಧ್ವಜ ಕಾರ್ಯಕ್ರಮಕ್ಕೆ ಟೀಕೆ ಸಲ್ಲದು. ಆ.21 ರಿಂದ ರಾಜ್ಯಾದ್ಯಂತ ಪ್ರವಾಸದ ಬಗ್ಗೆ ಸಭೆ ನಡೆಸಿ ಸ್ಥಳ ಶೀಘ್ರ ನಿಗದಿ ಮಾಡಲಾಗುವುದು ಎಂದರು.
ಮಕ್ಕಳಿಗೆ ಹೆಸರಿಟ್ಟ ಪ್ರಸಂಗ ಹೇಳಿದ ಬಿಎಸ್ವೈ; ನಾನು ಯಾವುದೇ ಕೆಲಸ ಆರಂಭ ಮಾಡುವ ಮುನ್ನ ಗುರು ರಾಘವೇಂದ್ರ ಸ್ಮರಣೆ ಮಾಡಿಯೇ ಮಾಡುವ ಪರಿಪಾಠವಿದೆ. ಈ ಹಿಂದೆ ನನಗೆ ಸ್ವಪ್ನದಲ್ಲಿ ಬಂದು ರಾಯರು ಅನುಗ್ರಹಿಸಿದ್ದರು. ರಾಯರ ಸ್ವಪ್ನದಲ್ಲಿ ಬಂದ ಮೇಲೆ ದೊಡ್ಡ ಮಗನಿಗೆ ರಾಘವೇಂದ್ರ ಎಂದು ಹೆಸರಿಡಲಾಗಿತ್ತು. ಮಂತ್ರಾಲಯದ ವಿಜಯತೀರ್ಥದಲ್ಲಿ ಪತ್ನಿ ಸಮೇತ ಕೆಲ ದಿನ ತಂಗಿದ್ದೆ. ಅದಾದ ಮೇಲೆ ಎರಡನೇ ಮಗ ಜನಿಸಿದ್ದರಿಂದ ವಿಜಯೇಂದ್ರ ಎಂದು ಹೆಸರಿಡಲಾಗಿತ್ತು. ಗುರುಗಳ ಆರಾಧನೆ ಶುಭ ಸಂದರ್ಭದಲ್ಲಿ ಬಂದಿರುವುದು ಬಹಳ ಖುಷಿ ಕೊಟ್ಟಿದೆ ಎಂದರು.
ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಅಂತಹ ಹೇಳಿಕೆ ನಿಲ್ಲಿಸಿ: ಬಿಎಸ್ವೈ