ರಾಯಚೂರು: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗಡಿಬಿಡಿಯಿಲ್ಲ. ಆಳೋ ಪಾರ್ಟಿ, ಅಳುವ ಪಾರ್ಟಿ, ಸೇವೆ ಮಾಡುವ ಪಾರ್ಟಿ ಎಂಬ ಮೂರು ಪಕ್ಷಗಳಿವೆ. ಆಳೋ ಪಾರ್ಟಿ ಕಾಂಗ್ರೆಸ್, ಅಳುವ ಪಾರ್ಟಿ ಜೆಡಿಎಸ್, ಸೇವಕನ ಪಾರ್ಟಿ ಬಿಜೆಪಿ. ಸೇವೆ ಮಾಡುವ ಪಕ್ಷವನ್ನು ಆರಿಸಿ ತನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಈಗಾಗಲೇ ಸಮೀಕ್ಷೆಗಳು, ಅಧ್ಯಯನಗಳು, ಸರ್ವೆಗಳು ನಡೆಯುತ್ತಿವೆ. ಗೆಲ್ಲುವ ಸೂಕ್ತ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಶಿಫಾರಸು ಮಾಡಲಾಗುವುದು. ಪಕ್ಷದ ಆಯ್ಕೆ ಸಮಿತಿಯಲ್ಲಿ ಹೆಸರನ್ನು ಅಂತಿಮ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆ ಎನ್ನುವ ಮಾತುಗಳು ಕೇವಲ ಊಹಾಪೋಹಗಳೆಂದು ತಿಳಿಸಿದರು.
ಅಕಾರ್ವತಿ ಡಿನೋಟಿಫಿಕೇಷನ್ ಹಗರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ನವರು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ಹಲ್ಲು ಇಲ್ಲದ ಹಾವಿನಂತೆ ಇರುವ ಎಸಿಬಿಯನ್ನು ಹುಟ್ಟು ಹಾಕಿದ್ದರು. ಆದರೆ, ನಾವು ಲೋಕಾಯುಕ್ತ ಸಂಸ್ಥೆಯನ್ನು ಪುನರ್ ಆರಂಭಿಸಿದ್ದೇವೆ. ಹಗರಣ ನಡೆದಿರುವ ಕುರಿತಂತೆ ವರದಿ ದಾಖಲೆಗಳು ಸಿಕ್ಕಿದ್ದು, ಅವುಗಳನ್ನು ಲೋಕಾಯುಕ್ತ ತನಿಖೆಗೆ ನೀಡಲಾಗುವುದು ಎಂದರು.
ಮೂರು ವಿಭಾಗಗಳಲ್ಲಿ ರಾಜ್ಯದಲ್ಲಿ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ಯಾತ್ರೆ ಇಂದು ಕೊನೆಯಾಗಲಿದ್ದು, ಬರುವ 1 ರಿಂದ ರಥಯಾತ್ರೆಯನ್ನು ಆರಂಭಿಸಲಾಗುವುದು. ವಿಜಯಸಂಕಲ್ಪ ಯಾತ್ರೆಗೆ ರಾಜ್ಯದಲ್ಲಿ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಗುರಿಯಂತೆ 150 ಸೀಟುಗಳನ್ನು ಜಯ ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ನಾಲ್ಕು ಹಂತಗಳಲ್ಲಿ ಪ್ರವಾಸ ಮುಕ್ತಾಯಗೊಳಿಸಿದ್ದಾರೆ. ಬರುವ 27 ರಂದು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸಹ ಪಕ್ಷದ ಸಂಘಟನೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನವರು ಮುಂದೆ ಶಾಶ್ವತವಾಗಿ ಕಿವಿಯಲ್ಲಿ ಹೂವಿಟ್ಟುಕೊಂಡೇ ತಿರುಗಬೇಕು: ನಳಿನ್ ಕುಮಾರ್ ಕಟೀಲ್
ಸಿದ್ದರಾಮಯ್ಯ ಅಲೆದಾಟ ನಡೆಸುವ ಅಲೆಮಾರಿ ಆಗಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಅಲೆದಾಟ ನಡೆಸುವ ಮೂಲಕ ಅಲೆಮಾರಿಯಾಗಿದ್ದಾರೆ. ಈ ಬಾರಿ ಬಾದಾಮಿಯಲ್ಲಿ ಜನ ಓಡಿಸಿದ್ದಾರೆ, ಇದಕ್ಕೂ ಮುನ್ನ ಚಾಮುಂಡಿಯಲ್ಲಿಯೂ ಓಡಿಸಿದ್ದರು. ಈಗ ಆಯ್ಕೆ ಮಾಡಿಕೊಂಡಿರುವ ಕೋಲಾರದಲ್ಲಿ ಅವಕಾಶವಿಲ್ಲ. ಇದರಿಂದ ಅವರಿಗೆ ಕ್ಷೇತ್ರವಿಲ್ಲದೆ ಅಲೆಮಾರಿಯಂತೆ ಅಲೆದಾಡುತ್ತಾ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲಿಂಗಸೂಗೂರು ಪಟ್ಟಣದಲ್ಲಿ ಆಯೋಜಿಸಿದ್ದ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಲೇವಡಿ ಮಾಡಿದರು.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಿರುದ್ಯೋಗಿಗಳಾಗ್ತಾರೆ. ಹುಲಿ ಕಾಡಿಗೆ ಹೋಗುತ್ತದೆ, ಬಂಡೆ ಒಡೆದು ಹೋಗುತ್ತದೆ. ಬಿಜೆಪಿಯ ಕಮಲ ಅರಳುತ್ತದೆ ಎಂದು ಕಟೀಲ್ ಭವಿಷ್ಯ ನುಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳೋದು ಒಳ್ಳೇದು : ನಳಿನ್ ಕುಮಾರ ಕಟೀಲ್ ಲೇವಡಿ
ಅರ್ಕಾವತಿ ನದಿಯನ್ನ ನುಂಗಿ ನೀರು ಕುಡಿದವರು ಸಿದ್ದರಾಮಯ್ಯ. ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ. ಮರಳು ಮಾಫಿಯಾ, ಭೂ ಮಾಫಿಯಾ, ಡ್ರಗ್ಸ್ ಮಾಫಿಯಾ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಅತಿಯಾಗಿತ್ತು. ನಮ್ಮ ಬಿಜೆಪಿ ಸರ್ಕಾರ ಡ್ರಗ್ಸ್ ಮಾಫಿಯಾ ಸೇರಿದಂತೆ ಎಲ್ಲವನ್ನು ಮಟ್ಟ ಹಾಕುವ ಕೆಲಸ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಯಿಂದ ಹಿಡಿದು ಸಿದ್ದರಾಮಯ್ಯನವರ ವರೆಗೂ ಅರ್ಕಾವತಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಘೋಷಣೆ ಮಾಡಿ ಅತಿ ಹೆಚ್ಚು ಅನುದಾನ ಕೊಟ್ಟಿದ್ದು ಬಿ.ಎಸ್ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ. ರೈತರಿಗಾಗಿ ವಿದ್ಯಾನಿಧಿ ಯೋಜನೆ ಘೋಷಣೆ ಮಾಡಿದ್ರು. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ನಮ್ಮ ಸರ್ಕಾರ ಎಂದರು.
ಬೈಕ್ ರ್‍ಯಾಲಿ: ಲಿಂಗಸುಗೂರು ಹೊರವಲಯದ ಎಂಎನ್‌ಕೆ ಹ್ಯಾಲಿಪ್ಯಾಡ್‌ನಿಂದ ಬೈಕ್ ರ್‍ಯಾಲಿ ಮತ್ತು ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಕಾರ್ಯಕರ್ತರು, ಫೆಂಡ್ಸ್ ಕಾಲೋನಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.